ಜಿಲ್ಲೆ

ನಾನು ರಾಕ್ಷಸನ ಕಥೆ ಮುಗಿಸಿದ್ದೇನೆ...! ನಿವೃತ್ತ IPS ಅಧಿಕಾರಿ ಪತ್ನಿಗೆ ವಿಡಿಯೋ ಕರೆ ಮಾಡಿ ಶವ ತೋರಿಸಿದ್ದ ಪಲ್ಲವಿ | Om Prakash

Om Prakash : ನಾನು ರಾಕ್ಷಸನನ್ನು ಮುಗಿಸಿದ್ದೇನೆ (I have finished a monster!) ಎಂದು ಓಂಪ್ರಕಾಶ್ ಅವರ ಪತ್ನಿ ಪಲ್ಲವಿ, ಮತ್ತೊಬ್ಬ ನಿವೃತ್ತ ಐಪಿಎಸ್ ಅಧಿಕಾರಿಯ ಪತ್ನಿಗೆ ವಿಡಿಯೋ ಕರೆ ಮಾಡಿ ಶವವನ್ನು ತೋರಿಸಿದ್ದರು ಎನ್ನಲಾಗಿದೆ. ಇದನ್ನು ನೋಡಿದ ಬಳಿಕ ನಿವೃತ್ತ ಐಪಿಎಸ್ ಅಧಿಕಾರಿಯ ಪತ್ನಿ ಪೊಲೀಸರಿಗೆ ತಿಳಿಸಿದ್ದರು ಎಂದು ಗೊತ್ತಾಗಿದೆ. ಕೊಲೆಯಾದ ಸ್ಥಳದಲ್ಲಿ ಎರಡು ಚಾಕು ಹಾಗೂ ಒಂದು ಬಾಟಲ್ ಪತ್ತೆಯಾಗಿದೆ. ಹೀಗಾಗಿ ಎರಡು ಚಾಕುವಿನಿಂದ ಇರಿದು ಕೊಂದಿರುವ ಶಂಕೆ ವ್ಯಕ್ತವಾಗಿದೆ.

ಕೊಲೆ ವಿಚಾರ ತಿಳಿದು ಮನೆ ಬಳಿಗೆ ಪೊಲೀಸರು ಬಂದಾಗ, ಬಾಗಿಲು ತೆರೆಯಲು ಪಲ್ಲವಿ ಹಿಂದೇಟು ಹಾಕಿದ್ದರು. ಸುಮಾರು ಅರ್ಧ ಗಂಟೆ ಬಳಿಕ ಪೊಲೀಸರ ಮನವಿ ನಂತರ ಬಾಗಿಲು ತೆರೆದಿದ್ದರು. ಬಳಿಕ ಅವರೇ ನೆಲಮಹಡಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಓಂಪ್ರಕಾಶ್ ಮೃತದೇಹದ ಬಳಿ ಕರೆದೊಯ್ದು ತೋರಿಸಿದರು ಎಂದು ಮೂಲಗಳು ತಿಳಿಸಿವೆ.

ಕೊಲೆಯಾದ ಓಂಪ್ರಕಾಶ್ ಅವರಿಗೆ ಚಿಕ್ಕಮಗಳೂರು ಮೂಲದ ಮಹಿಳೆ ಜತೆ ಆತ್ಮೀಯತೆ ಇತ್ತು ಎಂದು ಹೇಳಲಾಗುತ್ತಿದೆ. 2015ರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ವೇಳೆ ಅದೇ ಮಹಿಳೆ ನೃಪತುಂಗ ರಸ್ತೆಯಲ್ಲಿರುವ ಡಿಜಿಪಿ ಪ್ರಧಾನ ಕಚೇರಿ ಮುಂಭಾಗ ಬಂದು ಪ್ರತಿಭಟನೆ ನಡೆಸಿದ್ದಳು. ಈ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಓಂಪ್ರಕಾಶ್ ತನಗೆ ವಂಚಿಸಿದ್ದಾರೆ ಎಂದೆಲ್ಲ ಮಹಿಳೆ ಆರೋಪಿಸಿದ್ದಳು. ಅಲ್ಲದೆ, ಓಂಪ್ರಕಾಶ್ ಪುತ್ರ ಕಾರ್ತಿಕೇಶ್ ಮತ್ತು ಆತನ ಸ್ನೇಹಿತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದೂ ಮಹಿಳೆ ಆರೋಪ ಮಾಡಿದ್ದರು. ಹೈಗ್ರೌಂಡ್ಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಈ ವಿಚಾರಕ್ಕೂ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು. ಇತ್ತೀಚೆಗೆ ಅದೇ ಮಹಿಳೆ ಓಂಪ್ರಕಾಶ್ ಅವರನ್ನು ಭೇಟಿಯಾಗಿದ್ದರು ಎಂದು ಹೇಳಲಾಗಿದೆ. ಇದೇ ವಿಚಾರಕ್ಕೆ ಹತ್ಯೆ ನಡೆದಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಸೋಕೋ ತಂಡ ಪರಿಶೀಲನೆ

ಘಟನಾ ಸ್ಥಳಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ದಯಾನಂದ್, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಫ್​ಎಸ್​ಎಲ್, ಸೋಕೋ ತಂಡ ಪರಿಶೀಲನೆ ನಡೆಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಓಂಪ್ರಕಾಶ್ ಪುತ್ರ ನೀಡಿದ ದೂರಿನ ಮೇರೆಗೆ ಎಚ್​ಎಸ್​ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

2017ರಲ್ಲಿ ನಿವೃತ್ತಿ

ಓಂ ಪ್ರಕಾಶ್ 2015ರಲ್ಲಿ ರಾಜ್ಯದ 38ನೇ ಡಿಜಿ ಮತ್ತು ಐಜಿಪಿಯಾಗಿದ್ದರು. ಬಿಹಾರ ಮೂಲದ ಓಂಪ್ರಕಾಶ್, 1981ರ ಬ್ಯಾಚ್​ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದರು. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನಗರಗಳು, ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. 2015ರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡು 2017ರಲ್ಲಿ ನಿವೃತ್ತರಾಗಿದ್ದರು. ಕಾವೇರಿ ಜಂಕ್ಷನ್​ನ ಪ್ರತಿಷ್ಠಿತ ಅಪಾರ್ಟ್ ಮೆಂಟ್​ನಲ್ಲಿ ಫ್ಲಾ್ಯಟ್ ಹಾಗೂ ಎಚ್​ಎಸ್​ಆರ್ ಲೇಔಟ್​ನಲ್ಲಿ ಮನೆ ಇದೆ. ನಿವೃತ್ತಿ ಬಳಿಕ ಎಚ್​ಎಸ್​ಆರ್ ಲೇಔಟ್​ನ ಮೂರು ಅಂತಸ್ತಿನ ಮನೆಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು. ಡಿಜಿ ಮತ್ತು ಐಜಿಪಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್, ನಾಗರಿಕ ರಕ್ಷಣಾ ನಿರ್ದೇಶಕ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ವಾಟ್ಸ್​ಆಪ್ ಗ್ರೂಪ್​ನಲ್ಲಿ ಮಡದಿಯ ಆರೋಪ

ಕೆಲ ದಿನಗಳ ಮೊದಲು ಓಂಪ್ರಕಾಶ್ ಪತ್ನಿ ಪಲ್ಲವಿ, ಪೊಲೀಸ್ ಅಧಿಕಾರಿಗಳ ಪತ್ನಿಯರ ಅಸೋಸಿಯೇಷನ್ (ಪೋವಾ) ಎಂಬ ವಾಟ್ಸ್​ಆಪ್ ಗ್ರೂಪ್​ನಲ್ಲಿ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು ಎನ್ನಲಾಗಿದೆ. ಪತಿ ನನಗೆ ಮತ್ತು ನನ್ನ ಪುತ್ರಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಮನೆಯಲ್ಲೇ ಪಿಸ್ತೂಲ್ ಹಿಡಿದು ಓಡಾಡುತ್ತಿದ್ದಾರೆ. ಹೀಗಾಗಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ನಾಲ್ಕೈದು ದಿನಗಳ ಹಿಂದೆ ಸಂದೇಶ ಹಾಕಿದ್ದರು. ಆಗ ಕೆಲ ಸ್ನೇಹಿತರು ಸಮಾಧಾನಪಡಿಸಿದ್ದರು ಎನ್ನಲಾಗಿದೆ.

ಜೊಯಿಡಾ ಆಸ್ತಿಗಾಗಿ ಜಗಳ

ಓಂಪ್ರಕಾಶ್ ಹಿಂದೆ ಉ. ಕನ್ನಡ ಜಿಲ್ಲೆ ಎಸ್​ಪಿಯಾಗಿದ್ದರು. ಅವರ ಸಹೋದರಿ ದಾಂಡೇಲಿಯ ಕಾಲೇಜ್​ವೊಂದರಲ್ಲಿ ಉಪನ್ಯಾಸಕಿಯಾಗಿದ್ದರು. ಅದೇ ಸಂಪರ್ಕದಲ್ಲಿ ಕಾಳಿ ನದಿ ದಡದಲ್ಲಿ 5 ಎಕರೆ ಜಮೀನು ಖರೀದಿಸಿದ್ದರು. 2006-07 ರಲ್ಲಿ ಅದನ್ನು ಪುತ್ರ ಕಾರ್ತಿಕೇಶಗೆ ದಾನವಾಗಿ ನೀಡಿದ್ದರು. ಬಳಿಕ ಸಾಮಜೊಯಿಡಾ ಗ್ರಾಮದಲ್ಲಿ ಕಾರ್ತಿಕೇಶ ಹೆಸರಿನಲ್ಲೇ 2.5 ಎಕರೆ ಜಮೀನು ಖರೀದಿಸಿದ್ದರು. ಕೋಟ್ಯಂತರ ರೂ. ಬೆಲೆಬಾಳುವ ಈ ಜಮೀನಿನ ಕಾರಣಕ್ಕೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ.

ದಂಪತಿ ನಡುವೆ ಆಸ್ತಿ ಕಲಹ

2017ರಲ್ಲಿ ವಯೋನಿವೃತ್ತಿ ಹೊಂದಿದ್ದ ಓಂಪ್ರಕಾಶ್ ಬೆಂಗಳೂರು, ನಗರದ ಹೊರವಲಯ ಹಾಗೂ ನೆರೆ ಜಿಲ್ಲೆಗಳ ಗಡಿ ಭಾಗದಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. ಪತ್ನಿ, ಪುತ್ರ, ಪುತ್ರಿಯ ಹೆಸರಿನಲ್ಲೂ ಹತ್ತಾರು ಕೋಟಿ ರೂ. ಮೌಲ್ಯದ ಆಸ್ತಿ ಇರಿಸಿದ್ದಾರೆ. ಇತ್ತೀಚೆಗೆ ದಾಂಡೇಲಿಯಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ತಮ್ಮ ತಂಗಿಯರ ಹೆಸರಿನಲ್ಲಿ ನೋಂದಾಯಿಸಿದ್ದರು. ಅದಕ್ಕೆ ಪಲ್ಲವಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಕೆಲ ತಿಂಗಳಿಂದ ದಂಪತಿ ನಡುವೆ ಜಗಳ ನಡೆದು ವಿಕೋಪಕ್ಕೂ ಹೋಗಿತ್ತು. ಇದೇ ವಿಚಾರಕ್ಕೂ ಹತ್ಯೆ ನಡೆದಿ ರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಖಾರದ ಪುಡಿ ಎರಚಿದ್ದರೇ?:  ಎಚ್​ಎಸ್​ಆರ್ ಲೇಔಟ್​ನ ಮನೆಯ ನೆಲಮಹಡಿ ಹಾಲ್​ನಲ್ಲಿ ಓಂಪ್ರಕಾಶ್ ಕೊಲೆ ಯಾಗಿದೆ. ಕಣ್ಣಿಗೆ ಖಾರದ ಪುಡಿ ಎರಚಿ ಬಳಿಕ ಅವರನ್ನು ಕಟ್ಟಿಹಾಕಿ ಎದೆ, ಹೊಟ್ಟೆ, ಕೈ ಸೇರಿ ದೇಹದ ಇತರ ಭಾಗಗಳಿಗೆ 8-10 ಬಾರಿ ಇರಿದು ಕೊಲೆ ಮಾಡಲಾಗಿದೆ. ಚಾಕು ಇರಿತದಿಂದ ಇಡೀ ಹಾಲ್​ನಲ್ಲಿ ರಕ್ತ ಹರಿದಿದೆ. ಇರಿತಕ್ಕೀಡಾದ ಬಳಿಕ 10-15 ನಿಮಿಷ ಓಂ ಪ್ರಕಾಶ್ ರಕ್ತದ ಮಡುವಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆ ವಿಚಾರಕ್ಕೆ ಕಲಹ?: ಓಂಪ್ರಕಾಶ್​ಗೆ ಹಲವು ವರ್ಷಗಳ ಹಿಂದೆ ಮಹಿಳೆಯೊಬ್ಬರ ಜತೆ ಸ್ನೇಹವಿತ್ತು. ಈ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಜಗಳವಾಗಿತ್ತು. ಅಂದಿನಿಂದ ದಾಂಪತ್ಯದಲ್ಲಿ ಎಲ್ಲವೂ ಸರಿಯಿರಲಿಲ್ಲ. ಹೀಗಾಗಿ ಪತ್ನಿ ಮಗಳಿಂದ ದೂರ ಉಳಿದಿದ್ದರು.

ಪತ್ನಿಗೆ ಮಾನಸಿಕ ಕಾಯಿಲೆ?: ಓಂಪ್ರಕಾಶ್ ಪತ್ನಿ ಪಲ್ಲವಿ ಕಳೆದ 12 ವರ್ಷಗಳಿಂದ ಸ್ಕಿಜೋಫ್ರೇನಿಯಾ (ಭ್ರಮಾಧೀನತೆ) ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.