ರಾಮ ಕಿಶನ್ ಕೆ.ವಿ. ಬೆಂಗಳೂರು
ರಾಜಧಾನಿಯಲ್ಲಿ ಕೊಳವೆಬಾವಿಗಳು ಒಂದೊಂದಾಗಿ ಬತ್ತಿಹೋಗುವ ಸ್ಥಿತಿಯಲ್ಲಿದ್ದು, ರೀ-ಬೋರಿಂಗ್ ಪ್ರಕ್ರಿಯೆ ಹೆಚ್ಚುತ್ತಿದೆ. ಟ್ಯಾಂಕರ್ ನೀರಿಗೆ ಮೊರೆ ಹೋಗಬೇಕಾಗುವ ಸಂದರ್ಭ ಬಂದರೆ ವೃಥಾ ಹಣ ಖರ್ಚು ಮಾಡುವ ಬದಲು, ಮನೆಯಲ್ಲಿರುವ ಬೋರ್ವೆಲ್ ಅನ್ನು ರೀ ಬೋರಿಂಗ್ ಮಾಡಿಸಿದರೆ ಸ್ವಲ್ಪಮಟ್ಟಿಗೆ ನಿರಾಳತೆ ಪಡೆಯಬಹುದು ಎನ್ನುವುದೇ ಜನರ ಈ ನಡೆಗೆ ಕಾರಣ.
ಬರ ಮಧ್ಯೆಯೂ ಇಂಗುಗುಂಡಿ ವ್ಯವಸ್ಥೆಯಿರುವ ಪ್ರದೇಶ ಹಾಗೂ ಜಲ ಮರುಪೂರಣ ಮಾಡುತ್ತಿರುವ ಕಡೆಗಳಲ್ಲಿ ನೀರಿನ ಮಟ್ಟ ಪೂರ್ಣವಾಗಿ ಕುಸಿದಿಲ್ಲ. ಈ ವ್ಯವಸ್ಥೆ ಇಲ್ಲದ ಕೊಳವೆಬಾವಿಗಳಲ್ಲಿ ನೀರು ಖಾಲಿಯಾಗಿರುವುದು ಸಮಸ್ಯೆಯನ್ನು ಸೃಷ್ಟಿಸಿದೆ.
ಕಳೆದ ನವೆಂಬರ್ ಬಳಿಕ ನಗರದ ವಿವಿಧ ಭಾಗಗಳಲ್ಲಿ ಹೊಸದಾಗಿ ಬೋರ್ವೆಲ್ ಕೊರೆಸಲು ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಬೋರ್ವೆಲ್ ಯಂತ್ರದ ಮಾಲೀಕರೊಬ್ಬರು ಪ್ರತಿಕ್ರಿಯಿಸುತ್ತ, "ಹೊಸ ಮನೆ ನಿರ್ಮಿಸುತ್ತಿರುವವರು ಸಾಮಾನ್ಯವಾಗಿ ಮಳೆಗಾಲ ಮುಗಿಯುತ್ತಿದ್ದಂತೆ ಬೋರ್ವೆಲ್ ಕೊರೆಯಿಸುತ್ತಾರೆ. ಈ ಬಾರಿ ರೀ-ಬೋರಿಂಗ್ ಹೆಚ್ಚು ನಡೆಯುತ್ತಿದೆ. ಈ ಕ್ರಮ ಬೆರಳೆಣಿಕೆಯಷ್ಟು ಸಂದರ್ಭದಲ್ಲಿ ಯಶಸ್ಸು ಕಂಡಿದೆ' ಎಂದಿದ್ದಾರೆ.
ನಗರದ ಕೆಲ ಭಾಗಗಳಲ್ಲಿ 800 ಅಡಿ, ಮತ್ತೆ ಕೆಲವೆಡೆ 1,500 ಅಡಿ ಕೊರೆಸಿದರೂ ನೀರು ಲಭ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬತ್ತಿ ಹೋಗಿರುವ ಬೋರ್ವೆಲ್ಗೆ ರೀ&ಬೋರಿಂಗ್ ಮಾಡಿದಾಗ ನೀರು ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಇದಕ್ಕೆ ಹೆಚ್ಚು ವೆಚ್ಚವಾಗದ ಕಾರಣ ಮನೆ ಮಾಲೀಕರು ಅದೃಷ್ಟ ನೋಡೇಬಿಡೋಣ ಎಂದು ರೀ&ಬೋರಿಂಗ್ ನಡೆಸಲು ಮುಂದಾಗಿದ್ದಾರೆ.
ಜಲಮಂಡಳಿಯು ನಗರದಲ್ಲಿ 11,533 ಕೊಳವೆಬಾವಿಗಳನ್ನು ನಿರ್ವಹಣೆ ಮಾಡುತ್ತಿದ್ದು, ಈ ಪೈಕಿ 823 ಈಗಾಗಲೇ ಬತ್ತಿಹೋಗಿವೆ. ವಿವಿಧ ಬಡಾವಣೆ, ಫ್ಲ್ಯಾಟ್ಗಳಲ್ಲಿ ಸಾಕಷ್ಟು ಬೋರ್ವೆಲ್ಗಳಿದ್ದರೂ ಅಂತರ್ಜಲ ಕುಸಿತದಿಂದ ನೀರಿನ ಸಾಂದ್ರತೆ ಕ್ಷೀಣಿಸಿದೆ. ಮುಂದಿನ ದಿನಗಳಲ್ಲಿ ಬತ್ತಿಹೋಗುವ ಬೋರ್ವೆಲ್ಗಳ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಜಲತಜ್ಞರು ಅಂದಾಜಿಸಿದ್ದಾರೆ.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಬೋರ್ವೆಲ್ ಕೊರೆಸಲು ಅನುಮತಿ ನೀಡಲಾಗುತ್ತದೆ. ಇದರ ಹೊರತಾಗಿ ಅನ್ಯ ಉದ್ದೇಶಕ್ಕೆ ಅನುಮತಿ ಪಡೆಯದೆ ಅನಧಿಕೃತವಾಗಿ ಬೋರ್ವೆಲ್ ಕೊರೆದರೆ ದಂಡ ವಿಧಿಸಲಾಗುತ್ತದೆ ಎಂದು ಬೆಂಗಳೂರು ಜಲಮಂಡಳಿ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಮಳೆ ಕೊರತೆ ಹಾಗೂ ಸಮರ್ಪಕವಾಗಿ ಜಲ ಮರುಪೂರಣ ಆಗದೇ ಇರವುದರಿಂದ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ನೀರಿನ ಬಳಕೆ ಹೆಚ್ಚಾದಷ್ಟು, ಜಲ ಮರುಪೂರಣ ಆಗುತ್ತಿಲ್ಲ. ಜತೆಗೆ ನಗರದ ಭೂಪ್ರದೇಶ ಕಾಂಕ್ರೀಟ್ ಮಯವಾಗುತ್ತಿದ್ದು, ಮಳೆನೀರು ಇಂಗಲು ಸಾಧ್ಯವಾಗುತ್ತಿಲ್ಲ. ಈ ಅಂಶವು ಮುಂದಿನ ವರ್ಷಗಳಲ್ಲಿ ನೀರಿನ ಬಳಕೆಯ ಮೇಲೆ ನೇರ ಪರಿಣಾಮ ಬೀಳಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.