ಕುಂದಾಪುರ: ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ, ಲಯನ್ಸ್ ಕ್ರೌನ್ ಕುಂದಾಪುರ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್, ರೆಡ್ ರಿಬ್ಬನ್ ಕ್ಲಬ್ ಹಾಗೂ ಎನ್.ಸಿ.ಸಿ ಸಹಯೋಗದೊಂದಿಗೆ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ ಶನಿವಾರ ನಡೆಯಿತು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಸಭಾಪತಿ ಜಯಕರ ಶೆಟ್ಟಿ ಮಾತನಾಡಿ, ತಂತ್ರಜ್ಞಾನ ಮುಂದುವರಿದರೂ ರಕ್ತ ತಯಾರಿಸಲು ಅಥವಾ ದೇಹದ ಅಂಗಾಂಗಗಳು ತಯಾರಿಸಲು ತಂತ್ರಜ್ಞಾನ ಬಂದಿಲ್ಲ. ರಕ್ತನಿಧಿಗಳಲ್ಲಿ ರಕ್ತದ ಕೊರತೆ ಇದೆ. ಹಾಗಾಗಿ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯ ಮಾಡಬೇಕಿದೆ. ಮಾನವೀಯತೆ ನೆಲೆಯಲ್ಲಿ ರಕ್ತದಾನ ಮಾಡುವುದು ಮನುಷ್ಯತ್ವದ ಋಣ. ಇಂತಹ ಕಾರ್ಯದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಂಯೋಜಿತ ಆರೋಗ್ಯ ಮತ್ತು ಜೈವಿಕ ವೈದ್ಯಕೀಯ ಕಾರ್ಯಕ್ರಮ ಅಧಿಕಾರಿ ದೀಪ್ ಮಡ್ಕಂಕರ್ ಶಿಬಿರವನ್ನು ಉದ್ಘಾಟಿಸಿದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ಲಯನ್ಸ್ ಕ್ರೌನ್ ಅಧ್ಯಕ್ಷ ದಿನಕರ ಶೆಟ್ಟಿ, ಸದಸ್ಯ ಕಿರಣ್ ಆಚಾರ್ಯ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕುಂದಾಪುರ ಘಟಕದ ಮುತ್ತಯ್ಯ ಶೆಟ್ಟಿ, ಸತ್ಯನಾರಾಯಣ ಪುರಾಣಿಕ್, ಎನ್‌ಸಿಸಿ ಅಧಿಕಾರಿ ಶರಣ್ ಎಸ್.ಜೆ. ಉಪಸ್ಥಿತರಿದ್ದರು.
ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ರಾಮಚಂದ್ರ ಆಚಾರ್ಯ ಸ್ವಾಗತಿಸಿದರು. ಯೂತ್ ರೆಡ್‌ಕ್ರಾಸ್ ಸಂಯೋಜನಾಧಿಕಾರಿ ವಿದ್ಯಾರಾಣಿ ವಂದಿಸಿದರು. ವಿದ್ಯಾರ್ಥಿನಿ ಭೂಮಿಕಾ ನಿರೂಪಿಸಿದರು. ಶಿಬಿರದಲ್ಲಿ ಒಟ್ಟು 168 ಯುನಿಟ್ ರಕ್ತ ಸಂಗ್ರಹಿಸಲಾಯಿತು.