ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ಭಗವಂತನ ಸಾನ್ನಿಧ್ಯ, ಭಜನೆ, ಪೂಜೆ, ಸತ್ಸಂಗ, ಸನಾತನ ಪರಂಪರೆಗಳಿದ್ದರೆ ಮಾತ್ರ ಜೀವನ ಆನಂದಮಯವಾಗಲು ಸಾಧ್ಯ. ಜೀವನದಲ್ಲಿ ಆನಂದ ಬಿಟ್ಟರೆ ಬೇರೇನಿಲ್ಲ. ಹಾಗಾಗಿ ಪ್ರತಿಯೊಬ್ಬರು ಸತ್ಸಂಗಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಭಜನೆಯ ಮೂಲಕ ಜೀವನವನ್ನು ಪಾವನವಾಗಿಸಿಕೊಳ್ಳಬೇಕು ಎಂದು ಮೂಡುಬಿದಿರೆಯ ಜೈನಕಾಶಿ ದಿಗಂಬರ ಜೈನ ಮಠದ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿ ಹೇಳಿದರು.
ಪಡುಮಲೆಯ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರು ಕೂರ್ಮಾವತಾರ ತಾಳಿದ ಮೂಲಸ್ಥಾನವಾದ ಮದಕ ರಾಜರಾಜೇಶ್ವರಿ ಕ್ಷೇತ್ರಕ್ಕೆ ಭಾನುವಾರ ರಾತ್ರಿ ಭೇಟಿ ನೀಡಿ, ಕ್ಷೇತ್ರದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮನೋಜ್ ರೈ ಪೇರಾಲು, ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು, ಶರನ್ನವರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಆಳ್ವ ಗಿರಿಮನೆ, ಕಾರ್ಯದರ್ಶಿ ಗಂಗಾಧರ ರೈ ಮೇಗಿನಮನೆ, ಕೋಶಾಧಿಕಾರಿ ಶಿವಕುಮಾರ್ ಮುಂಡೋಳೆ, ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವ ಸಮಿತಿ ಮಾಜಿ ಅಧ್ಯಕ್ಷ ರಾಮಣ್ಣ ಗೌಡ ಬಸವನಹಿತ್ಲು, ಸುಬ್ಬಯ್ಯ ರೈ ಹಲಸಿನಡಿ ಉಪಸ್ಥಿತರಿದ್ದರು.