ಜಿಲ್ಲೆ

ಶಶಿಕಲಾ ನೀರಬಿದಿರೆ ಅಧ್ಯಕ್ಷೆ, ಬುದ್ಧ ನಾಯ್ಕ ಉಪಾಧ್ಯಕ್ಷ

ಸುಳ್ಯ: ಸುಳ್ಯ ನಗರ ಪಂಚಾಯಿತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲ ಗುರುವಾರ ಕೊನೆಗೊಂಡಿದ್ದು, ಅಧ್ಯಕ್ಷೆಯಾಗಿ ಎ.ಶಶಿಕಲಾ ನೀರಬಿದಿರೆ ಹಾಗೂ ಉಪಾಧ್ಯಕ್ಷರಾಗಿ ಬುದ್ಧ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷೆ ಅಭ್ಯರ್ಥಿ ಶಶಿಕಲಾ ನೀರಬಿದಿರೆ ಅವರನ್ನು ವಿನಯಕುಮಾರ್ ಕಂದಡ್ಕ ಸೂಚಿಸಿದರೆ, ಸುಧಾಕರ ಕೆ.ಅನುಮೋದಿಸಿದರು. ಉಪಾಧ್ಯಕ್ಷ ಅಭ್ಯರ್ಥಿ ಬುದ್ಧ ನಾಯ್ಕ ಅವರನ್ನು ಶೀಲಾ ಅರುಣ ಕುರುಂಜಿ ಸೂಚಿಸಿದರೆ, ಬಾಲಕೃಷ್ಣ ರೈ ದುಗಲಡ್ಕ ಅನುಮೋದಿಸಿದರು.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವಿಭಾಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವಿಭಾಗಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಶಿಕಲಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುದ್ಧ ನಾಯ್ಕ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣೆ ಇಲ್ಲದೆ ಈ ಇಬ್ಬರೂ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವಂತಾಯಿತು.

ಅಧ್ಯಕ್ಷರಾಗಿ ಆಯ್ಕೆಯಾದ ಶಶಿಕಲಾ ನೀರಬಿದಿರೆ ನಗರ ಪಂಚಾಯಿತಿ ಒಂದನೇ ವಾರ್ಡ್ ದುಗ್ಗಲಡ್ಕ ಕ್ಷೇತ್ರದಿಂದ ನಗರ ಪಂಚಾಯಿತಿ ಬಿಜೆಪಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ನಾಮನಿರ್ದೇಶಿತ ಸದಸ್ಯೆಯಾಗಿದ್ದರು. ಬಳಿಕ ಬಿಜೆಪಿ ಸೇರ್ಪಡೆಗೊಂಡು ನಗರ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಪತಿ ಹಾಗೂ ಈರ್ವರು ಪುತ್ರರೊಂದಿಗೆ ನೀರಬಿದಿರೆಯಲ್ಲಿ ವಾಸವಾಗಿದ್ದಾರೆ.

ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬುದ್ಧ ನಾಯ್ಕ 5ನೇ ವಾರ್ಡ್ ಹಳೆಗೇಟು ವಾರ್ಡ್‌ನಿಂದ ಮೊದಲ ಬಾರಿ ಸದಸ್ಯರಾಗಿ ಆಯ್ಕೆಯಾದವರು. 30 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ನಿವೃತ್ತಿಯ ಬಳಿಕ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ. ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಹೊಂದಿದ್ದಾರೆ.

ತಹಸೀಲ್ದಾರ್ ಜಿ.ಮಂಜುನಾಥ್ ಚುನಾವಣಾಧಿಕಾರಿಯಾಗಿದ್ದರು. ನಗರ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್, ಉಪ ತಹಸಸೀಲ್ದಾರ್ ಚಂದ್ರಕಾಂತ್ ಎಂ.ಆರ್.ಉಪಸ್ಥಿತರಿದ್ದರು.

ಸಂಸದ ಕ್ಯಾ.ಬೃಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ನಗರ ಪಂಚಾಯಿತಿ ಸದಸ್ಯರಾದ ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಭಟ್, ಕೆ.ಎಸ್.ಉಮ್ಮರ್, ಧೀರಾ ಕ್ರಾಸ್ತಾ, ಬಾಲಕೃಷ್ಣ ರೈ, ದುಗ್ಗಲಡ್ಕ,ಸುಧಾಕರ ಕುರುಂಜಿಗುಡ್ಡೆ, ನಾರಾಯಣ ಶಾಂತಿನಗರ, ಶರೀಫ್ ಕಂಠಿ, ರಾಜು ಪಂಡಿತ್, ಶೀಲಾ ಅರುಣ ಕುರುಂಜಿ, ಕಿಶೋರಿ ಶೇಟ್, ಪೂಜಿತಾ ಕೆ.ಯು., ಸರೋಜಿನಿ ಪೆಲ್ತಡ್ಕ, ಶಿಲ್ಪಾ ಸುದೇವ್, ಸುಶೀಲಾ ಜಿನ್ನಪ್ಪ, ಪ್ರವಿತಾ ಪ್ರಶಾಂತ್, ವಾಣಿಶ್ರೀ, ಎ.ವಿ.ತೀರ್ಥರಾಮ ಸೇರಿದಂತೆ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.