ಸಂಡೂರಿನಲ್ಲಿ ಬಿಕೆಜಿ ಸಂಸ್ಥೆಯಿಂದ ಆಸ್ಪತ್ರೆಯ ಸಿಬ್ಬಂದಿಗೆ ಕಿಟ್‌ನ್ನು ಬಿಕೆಜಿ ಸಂಸ್ಥೆಯ ಎಜಿಎಂ ಟಿ.ರಮೇಶ್ ವಿತರಿಸಿದರು. ಜಿಲ್ಲಾ ಕ್ಷಯರೋಗ ನಿಯಂತ್ರಾಣಾಧಿಕಾರಿ ಡಾ.ಇಂದ್ರಾಣಿ, ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪವನ್ ಇದ್ದರು. 
ಜಿಲ್ಲೆ

ಕ್ಷಯರೋಗಕ್ಕೆ ಕಡಿವಾಣ ಅಗತ್ಯ

ಪ್ರವೀಣ ಉದುಸಾ ದಲಬಂಜನ್

ಸಂಡೂರು: ಜಿಲ್ಲೆಯಲ್ಲಿ ಅತಿಹೆಚ್ಚು ಕ್ಷಯರೋಗ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದಲ್ಲಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಾಣಾಧಿಕಾರಿ ಡಾ.ಇಂದ್ರಾಣಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಬಿಕೆಜಿ ಸಭಾಂಗಣದಲ್ಲಿ ಕೇಂದ್ರ ಗಣಿ ಬ್ಯುರೋ ಸಹಯೋಗದಲ್ಲಿ ಸ್ವಚ್ಛತಾ ಹೀ ಸೇವಾ ಯೋಜನೆಯಡಿ ಸಂಸ್ಥೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ಅಪೌಷ್ಟಿಕ ಹಾಗೂ ರಕ್ತಹೀನತೆಯಿಂದ ಹೊರಬಂದಲ್ಲಿ ಕ್ಷಯರೋಗದ ಪ್ರಮಾಣವನ್ನು ಕಡಿಮೆ ಮಾಡಬಹುದು. ಹಣ್ಣು ತರಕಾರಿ ಸೇರಿ ಪೌಷ್ಟಿಕ ಆಹಾರ ಸೇವನೆ, ಸ್ವಚ್ಛ ಪರಿಸರದಲ್ಲಿ ಬದುಕುದು ಮುಖ್ಯ. ನಿತ್ಯ ವ್ಯಾಯಾಮ, ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಉತ್ತಮವಾಗಿರಲಿದೆ. ಪ್ರತಿ ರೋಗಕ್ಕೂ ಔಷಧವಿದೆ. ಆದರೆ ಪ್ರತಿ ಔಷಧಕ್ಕೂ ಆಡ್ಡಪರಿಣಾಮಗಳಿವೆ ಎಂಬುದನ್ನು ತಿಳಿಯಬೇಕಿದೆ. ಅತಿಯಾದ ಒತ್ತಡದ ಬದುಕಿನಿಂದ ಮಧುಮೇಹ, ಕ್ಯಾನ್ಸರ್, ಹೃದಯದ ಕಾಯಿಲೆಗಳು ಒಕ್ಕರಿಸುವ ಸಾಧ್ಯತೆಯಿದೆ. ಈ ಕುರಿತು ಎಚ್ಚರವಿರಲಿ ಎಂದು ಸಲಹೆ ನೀಡಿದರು.

ಆರೋಗ್ಯ ಇಲಾಖೆಯ ಸಿಬ್ಬಂದಿ ಅನುಷಾ, ಮಮತಾ, ಜಾತಪ್ಪ ಅವರು 60 ರೋಗಿಗಳಿಗೆ ಮಧುಮೇಹ, ರಕ್ತದೊತ್ತಡ ಮುಂತಾದ ರೋಗಗಳ ತಪಾಸಣೆ ಮಾಡಿದರು. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪವನ್, ಬಿಕೆಜಿ ಸಂಸ್ಥೆಯ ಎಜಿಎಂ ಟಿ.ರಮೇಶ್, ಎಚ್‌ಆರ್ ವಿಭಾಗದ ಜಿಎಂ ರಾಜಶೇಖರ್ ಬೆಲ್ಲದ್, ಆರ್‌ಪಿಸಿಎಲ್‌ನ ವೈದ್ಯ ಡಾ.ಅಜಯ್, ಸತ್ಯನಾರಾಯಣ ಗಿರಕಿ, ಪ್ರಹ್ಲಾದ ಇತರರಿದ್ದರು. ಬಿಕೆಜಿ ಸಂಸ್ಥೆ ಅಜಯ್, ಗೋಪಾಲ್ ನಿರ್ವಹಿಸಿದರು.