ಜಿಲ್ಲೆ

ಇನ್ನೂ ಸಿಗದ ಚುನಾವಣೆ ಕರ್ತವ್ಯದ ವೇತನ : ಬೀದಿಗಿಳಿದು ಹೋರಾಟಕ್ಕೆ ಮುಂದಾದ ಎಕೆಪಿಎ

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಲೋಕಸಭಾ ಚುನಾವಣೆ ಸಂದರ್ಭ ಕಾಸರಗೋಡು ಜಿಲ್ಲೆಯ ವಿವಿಧ ಸ್ಕ್ವಾಡ್‌ಗಳು ಮತ್ತು ಚುನಾವಣಾ ಬೂತ್‌ಗಳಲ್ಲಿ ವಿಡಿಯೋ ಚಿತ್ರೀಕರಣ ನಡೆಸಿರುವ ವೀಡಿಯೋಗ್ರಾಫರ್‌ಗಳಿಗೆ ಇನ್ನೂ ವೇತನ ಪಾವತಿಯಾಗದಿರುವುದರಿಂದ ಸಂಕಷ್ಟ ಎದುರಾಗಿದೆ.

ಪ್ರತಿ ಬಾರಿ ಚುನಾವಣೆ ಸಂದರ್ಭ ಜಿಲ್ಲಾಡಳಿತ ಈ ರೀತಿಯ ಒಂದಲ್ಲ ಒಂದು ಎಡವಟ್ಟು ಮಾಡಿಕೊಂಡೇ ಬರುತ್ತಿದ್ದು, ಈ ಬಾರಿ ವಿಡಿಯೋಗ್ರಾಫರ್‌ಗಳನ್ನು ಯಾಮಾರಿಸತೊಡಗಿದೆ. ಈ ಹಿಂದೆ ಚುನಾವಣಾ ಕರ್ತವ್ಯಕ್ಕಾಗಿ ತೆರಳುವ ವಾಹನ ಚಾಲಕರ ವೇತನ ಪಾವತಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದರೆ, ಇದಕ್ಕೂ ಮುನ್ನ ಚುನಾವಣಾ ಕರ್ತವ್ಯಕ್ಕೆ ಬಳಸುವ ವಾಹನಗಳ ಬಾಡಿಗೆ ವಿಚಾರದಲ್ಲೂ ಇಂತಹ ವಿಳಂಬ ಧೋರಣೆ ಕಂಡುಬಂದಿತ್ತು. ನಂತರ ಸುದೀರ್ಘ ಹೋರಾಟದ ನಂತರ ಹಣ ಬಿಡುಗಡೆಗೊಂಡಿತ್ತು.

ಬೀದಿಗಿಳಿದ ವಿಡಿಯೋಗ್ರಾಫರ್ಸ್

ಚುನಾವಣೆ ಸಂದರ್ಭ ಮೂರು ತಿಂಗಳಿಗೂ ಹೆಚ್ಚುಕಾಲ ಜಿಲ್ಲೆಯಲ್ಲಿ 1,600 ಮಂದಿ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, 45 ಲಕ್ಷ ರೂ.ಮೊತ್ತ ವೇತನ ರೂಪದಲ್ಲಿ ಅಖಿಲ ಕೇರಳ ಫೋಟೋಗ್ರಾಫರ್ಸ್ ಒಕ್ಕೂಟ(ಎಕೆಪಿಎ) ಸದಸ್ಯರಿಗೆ ಲಭಿಸಲು ಬಾಕಿಯಿದೆ. ಕಣ್ಣೂರು ಕಾಸರಗೋಡು ಜಿಲ್ಲೆಗಳಲ್ಲಿ ಈ ಉದ್ದೇಶಕ್ಕಾಗಿ ಹಣ ಮಂಜೂರು ಮಾಡಲಾಗಿದ್ದರೂ, ಈಗ ಅಧಿಕಾರಿಗಳು ಖಜಾನೆ ನಿಯಂತ್ರಣದ ಕಾರಣ ಮುಂದೊಡ್ಡಿ ಹಣ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿ ವರ್ಗದ ಧೋರಣೆ ಬಗ್ಗೆ ಅಖಿಲ ಕೇರಳ ಫೋಟೋಗ್ರಾಫರ್ಸ್ ಸಂಘಟನೆ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದೆ. ವೇತನ ಬಿಡುಗಡೆಗೆ ಆಗ್ರಹಿಸಿ ಮೊದಲ ಹಂತದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅ. 5ರಂದು ಧರಣಿ ಹಮ್ಮಿಕೊಳ್ಳಲಾಗುವುದು. ಸೂಕ್ತ ನಿರ್ಧಾರ ಕೈಗೊಳ್ಳದಿದ್ದಲ್ಲಿ ರಾಜ್ಯ ಸಮಿತಿ ನೇತೃತ್ವದಲ್ಲಿ ಎಲ್ಲ 14 ಜಿಲ್ಲೆಗಳ ಸದಸ್ಯರೊಂದಿಗೆ ಸೇರಿ ರಾಜ್ಯಮಟ್ಟದಲ್ಲಿ ಆಂದೋಲನ ಹಮ್ಮಿಕೊಳ್ಳುವುದಾಗಿ ಎಕೆಪಿಎ ಪದಾಧಿಕಾರಿಗಳು ತಿಳಿಸಿದ್ದಾರೆ.