ಹೂವಿನಹಡಗಲಿ ತಾಲೂಕಿನ ತಳಕಲ್ಲು ಗ್ರಾಮದ ಕಾರ್ಮಿಕರು ಮಹಾಜನದಹಳ್ಳಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಗ್ರಾಕೂಸ್ ತಾಲೂಕು ಅಧ್ಯಕ್ಷ ಶಬೀರ್, ಪಿಎಸ್‌ಐ ನಾರಾಯಣ, ಕೂಲಿಕಾರ್ಮಿಕರಾದ ಕರಿಯಪ್ಪ, ಕೊಟ್ರಗೌಡ, ಲಕ್ಷ್ಮೀ, ಕರಿಯಮ್ಮ, ಗೌರಮ್ಮ ಇತರರಿದ್ದರು. 
ಜಿಲ್ಲೆ

ಸಂಬಳದಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಿ

ಹೂವಿನಹಡಗಲಿ: ಮನರೇಗಾ ಕೂಲಿಯಲ್ಲಾಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ತಾಲೂಕಿನ ತಳಕಲ್ಲು ಗ್ರಾಮದ ಕಾರ್ಮಿಕರು ಮಹಾಜನದಹಳ್ಳಿ ಗ್ರಾಪಂ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಗ್ರಾಕೂಸ್ ಪದಾಧಿಕಾರಿಗಳು ಮಾತನಾಡಿ, ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸ ಮಾಡಿದ ಕೂಲಿ ಹಣವನ್ನು ಉದ್ದೇಶ ಪೂರ್ವಕವಾಗಿ ಕಡಿಮೆ ಮಾಡಿದ್ದಾರೆ. ನರೇಗಾ ಅಡಿಯಲ್ಲಿ ಕೆಲಸ ಮಾಡಿದ್ದನ್ನು ಇಂಜಿನಿಯರ್ ಸರಿಯಾಗಿ ಅಳತೆ ಮಾಡಿಲ್ಲ. ಕೆಲಸ ಪೂರ್ಣಗೊಂಡ ಬಳಿಕ ಅಳತೆ ಮಾಡಬೇಕು. ಆದರೆ ಕೆಲಸ ಇನ್ನು ಬಾಕಿ ಇರುವಾಗಲೇ ಅಳತೆ ಮಾಡಿದ್ದಾರೆ.

ನರೇಗಾ ಯೋಜನೆ ಅಡಿಯಲ್ಲಿ 349 ರೂ. ಸಂಬಳ ನೀಡಬೇಕು. ಆದರೆ ಕೇವಲ 300 ರೂ. ಮಾತ್ರ ನೀಡುತ್ತಿದ್ದಾರೆ. ಕೆಲಸ ಸ್ಥಳದಲ್ಲಿ ಯಾವುದೇ ಮೂಲ ಸೌಲಭ್ಯ ಸಿಗದಿದ್ದರೂ ನಾವು ಕೆಲಸ ಮಾಡಿದ್ದೇವೆ. ನಮಗೇ ಬರಬೇಕಾದ ಬಾಕಿ ಸಂಬಳ ನೀಡದಿದ್ದಲ್ಲಿ ಜಿಪಂ ಕಚೇರಿಯ ಎದುರು ಧರಣಿ ಮಾಡಲಾಗುವುದು.

ಮೇಟಿಗಳಿಗೆ 2021 ರಿಂದ ಗೌರವ ಧನ ಆದೇಶವಾದರೂ ಇದುವರೆಗೆ ಇಂಜಿನಿಯರ್‌ಗಳು ದಾಖಲೆ ಮಾಡಿಕೊಟ್ಟಿರುವುದಿಲ್ಲ. ಅದನ್ನು ಕೂಡಲೇ ಮೇಟಿಗಳಿಗೆ ಸಿಗುವಂತೆ ಮಾಡಬೇಕು ಎಂದು ಪಟ್ಟು ಹಿಡಿದು ಪಿಡಿಒ ಪ್ರಭಾಕರ ಅವರಿಗೆ ಮನವಿ ಸಲ್ಲಿಸಿದರು.