More

    ನರೇಗಾ ದುರುಪಯೋಗ ವಿರೋಧಿಸಿ ಉಪವಾಸ ಸತ್ಯಾಗ್ರಹ

    ಮಾಗಡಿ : ಹಂಚಿಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಜೋಡುಗಟ್ಟೆ ನಾಗರಾಜು ಗ್ರಾಪಂ ಮುಂಭಾಗ ಮಂಗಳವಾರ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

    ಬಲಾಢ್ಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಇ-ಖಾತೆ ಇರುವ ಬಡ ರೈತನ ಜಮೀನ ಮೇಲೆ ರಸ್ತೆ ಮಾಡಲು ಮುಂದಾಗಿದ್ದಾರೆ. ನರೇಗಾ ಯೋಜನೆಯ ಕಾಮಗಾರಿ ಅದಲು-ಬದಲು ಮಾಡಿ ಯೋಜನೆ ದುರುಪಯೋಗಪಡಿಸಿಕೊಂಡಿದ್ದಾರೆ. ನಕಾಶೆ ರಸ್ತೆಯ ಜಾಗದಲ್ಲಿ ರಸ್ತೆ ನಿರ್ಮಿಸುವ ಬದಲು ರಾಜಕಾರಣಿಗೆ ಅನುಕೂಲ ಮಾಡಲು ಮತ್ಯಾರದೋ ಜಮೀನಿನಲ್ಲಿ ರಸ್ತೆ ಮಾಡಿ ನಕಾಶೆ ರಸ್ತೆಯ ಜಾಗವನ್ನು ಜಮೀನು ಮಾಡಿಕೊಂಡಿದ್ದಾರೆ. ಜೋಡುಗಟ್ಟೆ ಗ್ರಾಮದಲ್ಲಿನ ಸರ್ಕಾರಿ ಕೊಳವೆ ಬಾವಿಯಿಂದ ನೇರ ಹಣವಂತರ ಮನೆಯ ಸಂಪಿಗೆ ವಾಟರ್‌ಮನ್ ನೀರು ಹರಿಸುತ್ತಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

    ಜೋಡುಗಟ್ಟೆ ಗ್ರಾಮದ ಸರ್ವೇ ನಂ. 91, 93 ರ ಮಧ್ಯೆ ಇದ್ದ ಗೋಕಟ್ಟೆಯನ್ನು ಖಾಸಗಿ ವ್ಯಕ್ತಿಗಳು ಮುಚ್ಚಿ ಜಮೀನು ಮಾಡಿಕೊಂಡಿದ್ದಾರೆ. ಇದರಿಂದ ಈ ಭಾಗದಲ್ಲಿನ ಹಸು, ಕರು, ಮೇಕೆಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ನರೇಗಾ ಯೋಜನೆ ಕಾಮಗಾರಿ ನಡೆಯದಿದ್ದರೂ ಬೇರೆಯವರು ನಡೆಸಿರುವ ಕಾಮಗಾರಿ ತೋರಿಸಿ ಬಿಲ್ಲು ಮಾಡಿದ್ದಾರೆ. ಈ ಭ್ರಷ್ಟಾಚಾರವನ್ನು ಸಮಗ್ರ ತನಿಖೆ ಮಾಡುವಂತೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುವವರೆಗೂ ಆಮರಾಣಾಂತ ಉಪವಾಸ ಸತ್ಯಾಗ್ರಹ ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

    ಡಿಸಿ ಬರುವವರೆಗೂ ನಿಲ್ಲಿಸಲ್ಲ : ಮಂಗಳವಾರ ಸಂಜೆ 5ಗಂಟೆಗೆ ತಾಪಂ ಇಒ ಸ್ಥಳಕ್ಕೆ ಭೇಟಿ ನೀಡಿದರು. ಸರ್ಕಾರಿ ಜಮೀನನ್ನು ಅಳತೆ ಮಾಡಿಸಲಾಗುವುದು. ಒತ್ತುವರಿಯಾಗಿದ್ದರೆ ತೆರವುಗೊಳಿಸುವ ಭರವಸೆ ನೀಡಿದರು. ಆದರೂ ಪ್ರತಿಭಟನೆ ಕೈಬಿಡದೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದ ನಾಗರಾಜು ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ.

    ಗ್ರಾಮ ಪಂಚಾಯಿತಿ ಸದಸ್ಯರು ಸರ್ಕಾರಿ ಜಮೀನೆಂದು ನರೇಗಾ ಯೋಜನೆಯಡಿ ರಸ್ತೆ ಕಾಮಗಾರಿ ಮಾಡಿಸಲು ಮುಂದಾದಾಗ ಆ ಜಮೀನು ಖಾಸಗಿಯವರಿಗೆ ಸೇರಿದ್ದು ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಮಾಡಲು ಎಡಿಎಲ್‌ರೊಂದಿಗೆ ಮಾತನಾಡಿದ್ದೇನೆ. ಈಗಾಗಲೇ ಪಿಡಿಒ ಸಹ ಸರ್ವೇ ನಡೆಸುವಂತೆ ಇಲಾಖೆಗೆ ಅರ್ಜಿ ಬರೆದಿದ್ದಾರೆ ಎಂದು ತಿಳಿಸಿದ್ದರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ವೇ ನಡೆಸಿ ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುವುದು.
    ಕೃಷ್ಣ, ತಾಪಂ ಇಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts