ನದಿಯಲ್ಲಿ ಕೋಳಿ ತ್ಯಾಜ್ಯ ತೇಲುತ್ತಿರುವುದು.  
ಜಿಲ್ಲೆ

ಹೆಬ್ರಿಯ ಜೀವನದಿಗೆ ತ್ಯಾಜ್ಯ ಕಂಟಕ!

Karthika K.S

ನರೇಂದ್ರ ಎಸ್.ಮರಸಣಿಗೆ ಹೆಬ್ರಿ

ಹೆಬ್ರಿಯ ಜಲಮೂಲವಾಗಿರುವ ಸೀತಾನದಿಗೆ ಕುಚ್ಚೂರು ಮಠದಬೆಟ್ಟು ಸೇತುವೆ ಬಳಿ ಭಾನುವಾರ ಕಿಡಿಗೇಡಿಗಳು ತ್ಯಾಜ್ಯ ಎಸೆದು ಮಲೀನಗೊಳಿಸಿದ್ದಾರೆ.

ಸೇತುವೆ ಪಕ್ಕದಲ್ಲಿ ದಿನನಿತ್ಯವೂ ಕೋಳಿ ಸಹಿತ ವಿವಿಧ ತ್ಯಾಜ್ಯ ಎಸೆಯಲಾಗುತ್ತಿದ್ದು, ಕಿಡಿಗೇಡಿಗಳನ್ನು ಪತ್ತೆಹಚ್ಚುವುದು ಸ್ಥಳೀಯ ಪಂಚಾಯಿತಿಗೆ ಸವಾಲಾಗಿ ಪರಿಣಮಿಸಿದೆ. ಸೀತಾನದಿ ಮಾತ್ರವಲ್ಲದೇ ಸ್ಥಳೀಯ ತೋಡುಗಳು, ರಸ್ತೆಗಳಲ್ಲಿ ಕೂಡ ತ್ಯಾಜ್ಯಗಳನ್ನು ಎಸೆಯಲಾಗುತ್ತಿದ್ದು, ಇದು ಕೊಳೆತು ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡುತ್ತಿವೆ.

ತ್ಯಾಜ್ಯ ಎಸೆಯಲ್ಪಡುವ ಸ್ಥಳದ ಸಮೀಪವೇ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಇದೆ. ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳಿಗೆ ಇದರಿಂದ ಸರಬರಾಜುಗೊಳ್ಳುತ್ತದೆ. ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ನದಿಗಳಲ್ಲಿ, ರಸ್ತೆಗಳಲ್ಲಿ ಕಸ, ತ್ಯಾಜ್ಯ ಎಸೆಯುವುದಕ್ಕೆ ತಡೆಯೊಡ್ಡಬೇಕಿದೆ.

ಕೈಗೊಳ್ಳಬೇಕಾದ ಕ್ರಮಗಳು: ನದಿ, ತೋಡುಗಳ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವಿಕೆ ವಿರುದ್ಧ ಕಠಿಣ ಕಾನೂನು ರೂಪಿಸಿ ಜಾರಿಗೊಳಿಸಬೇಕು. ಸ್ಥಳೀಯ ಅಂಗಡಿ, ಕಾರ್ಖಾನೆಗಳಲ್ಲಿ ನಡೆಯುವ ತ್ಯಾಜ್ಯ ವಿಲೇವಾರಿ ಕಾರ್ಯದ ವಿರುದ್ಧ ಹದ್ದಿನಗಣ್ಣು ಇಡಬೇಕಿದ್ದು, ವಿಲೇವಾರಿ ಸಂದರ್ಭ ಪರಿಶೀಲಿಸುವ ವ್ಯವಸ್ಥೆ ಜಾರಿಗೊಳಿಸಬೇಕಿದೆ. ಸ್ಥಳೀಯ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಸಬೇಕಿದ್ದು, ಸೂಕ್ತವಾಗಿ ನಿರ್ವಹಣೆಗೊಳ್ಳುವಂತೆ ಪಹರೆ ನಿಯೋಜಿಸಬೇಕು ಎಂದು ಸ್ಥಳೀಯರು ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.

ಕುಚ್ಚೂರು ಮಠದಬೆಟ್ಟು ಸೇತುವೆ ಬಳಿ ಸೀತಾ ನದಿಗೆ ಕಿಡಿಗೇಡಿಗಳು ಕೋಳಿ ತ್ಯಾಜ್ಯ ಎಸೆದು ಪರಾರಿಯಾಗಿದ್ದಾರೆ. ಸೀತಾ ನದಿಯ ನೀರು ಲಕ್ಷಾಂತರ ಜನರಿಗೆ ಜೀವನದಿಯಾಗಿದ್ದು, ಬೇಸಿಗೆಯಿಂದಾಗಿ ನೀರಿನ ಸಮಸ್ಯೆಯೂ ಆರಂಭವಾಗಿದೆ. ತ್ಯಾಜ್ಯ ಎಸೆಯುವವರ ಪತ್ತೆಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶ್ರೀಕಾಂತ್ ಪೂಜಾರಿ ಕುಚ್ಚೂರು ಸಾಮಾಜಿಕ ಹೋರಾಟಗಾರ. ನದಿಯಲ್ಲಿ ತ್ಯಾಜ್ಯ ಎಸೆದಿರುವ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಸಂಬಂಧಪಟ್ಟವರಿಗೆ ಸೂಚಿಸುತ್ತೇನೆ. ಅಂಗಡಿಯವರು ತ್ಯಾಜ್ಯ ವಿಲೇವಾರಿಗೆ ಕೈಗೊಳ್ಳುವ ಕ್ರಮಗಳ ಕುರಿತು ತಪಾಸಣೆ ನಡೆಸುವಂತೆ ತಾಲೂಕಿನ ಎಲ್ಲ ಪಿಡಿಒಗಳಿಗೆ ಸೂಚಿಸಿದ್ದೇನೆ. ಶಶಿಧರ್ ಕೆಜೆ ಹೆಬ್ರಿ ತಾಲೂಕು ಪಂಚಾಯಿತಿ ಇಒ