ಮಹಾತ್ಮಗಾಂಧಿ ಪ್ರೌಢಶಾಲೆ ಸಾಹೇಬರಕಟ್ಟೆ 2024-25ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ ಚುನಾವಣೆ ಶನಿವಾರ ಜರುಗಿತು 
ಜಿಲ್ಲೆ

ಇವಿಎಂ ತಂತ್ರಜ್ಞಾನ ಬಳಸಿ ಸಾಬ್ರಕಟ್ಟೆ ವಿದ್ಯಾರ್ಥಿ ಸಂಸತ್ ಚುನಾವಣೆ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಮಹಾತ್ಮಗಾಂಧಿ ಪ್ರೌಢಶಾಲೆ ಸಾಬ್ರಕಟ್ಟೆ 2024-25ನೇ ಸಾಲಿನ ಶಾಲಾ ವಿದ್ಯಾರ್ಥಿ ಸಂಸತ್ ಚುನಾವಣೆಗೆ ಒಂದು ವಾರದ ಮುಂಚೆ ಚುನಾವಣಾ ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಶನಿವಾರ ಚುನಾವಣೆ ನಿಗದಿಯಾಗಿತ್ತು.

ನಾಮಪತ್ರ ಸಲ್ಲಿಸುವಿಕೆ, ಪರಿಶಿಲನೆ, ಹಿಂತೆಗೆತ, ಚುನಾವಣಾ ಪ್ರಚಾರ, ಚುನಾವಣೆ, ಮತ ಎಣಿಕೆ ಎಲ್ಲದಕ್ಕೂ ದಿನಾಂಕ ಘೋಷಿಸಲಾಗಿತ್ತು. ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ನಾಮಪತ್ರ ತುಂಬಿ ಮುಖ್ಯಚುನಾವಣಾಧಿಕಾರಿಯವರಿಗೆ ಸಲ್ಲಿಸಿದ್ದರು. ಶಾಲಾ ನಾಯಕ ಮತ್ತು ಉಪನಾಯಕ ಸ್ಥಾನಕ್ಕೆ ಮೂವರು ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಐದು ದಿನ ಬಿರುಸಿನ ಚುನಾವಣಾ ಪ್ರಚಾರದ ನಂತರ ಚುನಾವಣಾ ವೇದಿಕೆ ಸಜ್ಜಾಗಿತ್ತು. ಸಂಸದೀಯ ಮಾದರಿಯ ಚುನಾವಣಾ ಪರಿಕಲ್ಪನೆ ಇಟ್ಟುಕೊಂಡು ಇವಿಎಂ ತಂತ್ರಜ್ಞಾನ ಬಳಸಿ ನಾಯಕ ಹಾಗೂ ಉಪನಾಯಕನ ಆಯ್ಕೆ ಮಾಡಲಾಯಿತು.

ಎಲ್ಲ ಮತದಾರ ವಿದ್ಯಾರ್ಥಿಗಳು ಗುರುತು ಪತ್ರ ತೋರಿಸಿ ಮತ ಚಲಾಯಿಸಿದರು. ಮೊದಲ ಮತದಾನದ ಅಧಿಕಾರಿ ಮತದಾರರ ಗುರುತು ದಾಖಲಿಸಿದರೆ, ಎರಡನೇ ಮತದಾನ ಅಧಿಕಾರಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಿ ಮತದಾರರ ರಿಜಿಸ್ಟ್ರಾರ್‌ನಲ್ಲಿ ಸಹಿ ಪಡೆದು ಮತ ಪತ್ರ ನೀಡಿದರು. ಮೂರನೇ ಮತದಾನದ ಅಧಿಕಾರಿ ಮತ ಪತ್ರ ಪಡೆದು ಇವಿಎಂ ಕಂಟ್ರೋಲ್ ಯೂನಿಟ್‌ನಲ್ಲಿ ಓಟ್ ನೀಡಿದರು.

ಪ್ರತ್ಯೇಕ ಕಂಪಾರ್ಟ್ ಮೆಂಟ್‌ನಲ್ಲಿ ಇರಿಸಲಾಗಿದ್ದ ಬ್ಯಾಲೆಟ್ ಯೂನಿಟ್‌ನಲ್ಲಿ ಮಕ್ಕಳು ತಮಗೆ ತಮ್ಮ ಆಯ್ಕೆಯ ಅಭ್ಯರ್ಥಿಯ ಎದುರಿನ ನೀಲಿ ಗುಂಡಿ ಒತ್ತಿ ಮತ ಚಲಾಯಿಸಿದರು. ನಂತರ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ ಎಣಿಸಲಾಯಿತು.

10ನೇ ತರಗತಿಯ ಖಾಝಾ ಬಂದೆ ನವಾಝ್ ಶಾಲಾ ನಾಯಕ, ಉಪನಾಯಕನಾಗಿ 8ನೇ ತರಗತಿಯ ರಾಜು ಆಯ್ಕೆಯಾದರು. ವಿಜೇತ ಅಭ್ಯರ್ಥಿಗಳನ್ನು ಮುಖ್ಯಶಿಕ್ಷಕ ಸತೀಶ ನಾಯ್ಕ ಅಭಿನಂದಿಸಿದರು. ಶಿಕ್ಷಕರಾದ ವಿಜಯ್ ಕುಮಾರ್ ಶೆಟ್ಟಿ, ಸುಬ್ರಹ್ಮಣ್ಯ, ಯಶೋದಾ, ಗೀತಾ, ಡೈಸಿ ಡಿಸಿಲ್ವ, ಗಣೇಶ್ ನಾಯಕ್ ಮತಗಟ್ಟೆ ಸಿಬ್ಬಂದಿಯಾಗಿ ಸಹಕರಿಸಿದರು. ಮುಖ್ಯ ಚುನಾವಣಾಧಿಕಾರಿಯಾಗಿ ಸತೀಶ್ ನಾಯ್ಕ ಕಾರ್ಯನಿರ್ವಹಿಸಿದರು.