ಜಿಲ್ಲೆ

ಸರ್ಕಾರದ ಸವಲತ್ತಿಗಾಗಿ ಮದ್ವೆಯಾಗಿ ಕಿರುಕುಳ: ಜಾತಿನಿಂದನೆಯಿಂದ ಬೇಸತ್ತು ತುಮಕೂರಿನ ಗೃಹಿಣಿ ಆತ್ಮಹತ್ಯೆ

ತುಮಕೂರು: ಪರಿಶಿಷ್ಟ ಜಾತಿಯವಳನ್ನು ಮದುವೆಯಾದರೆ ಸರ್ಕಾರದಿಂದ ಸೌಲಭ್ಯ ಸಿಗುತ್ತದೆ ಎನ್ನುವ ಒಂದೇ ಕಾರಣಕ್ಕೆ ಮದುವೆಯಾಗಿ ನಂತರ ಚಿತ್ರಹಿಂಸೆ ಕೊಡುತ್ತಿದ್ದ ಗಂಡನ ಕಿರುಕುಳ ತಾಳದೇ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕಿನ ಅನುಪನಹಳ್ಳಿಯಲ್ಲಿ ನಡೆದಿದೆ.

ಗೌರಮ್ಮಾ (22) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ದಂಪತಿ ನಡುವೆ ಜಗಳವಾಗಿದ್ದರಿಂದ ನೇಣು ಬಿಗಿದುಕೊಂಡು ಗೌರಮ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೌರಮ್ಮ ತುಮಕೂರು ಹೊರವಲಯದ ಮಂಚಗೊಂಡನಹಳ್ಳಿಯ ನಿವಾಸಿ. ಇವರ ವಿವಾಹ ಒಂದು ವರ್ಷದ ಹಿಂದೆಯಷ್ಟೇ ಅನುಪನಹಳ್ಳಿಯ ನಿವಾಸಿ ರವಿತೇಜ ಎಂಬಾತನ ಜತೆ ನಡೆದಿತ್ತು. ಗೌರಮ್ಮಾ ಅವರಿಗೆ ತಂದೆ-ತಾಯಿ ಇರಲಿಲ್ಲ, ಚಿಕ್ಕಮ್ಮನೇ ಸಾಕಿ, ಮದುವೆ ಮಾಡಿಕೊಟ್ಟಿದ್ದರು.

ತುಮಕೂರಿನ ಯಲ್ಲಾಪುರದ ಗಾರ್ಮೆಂಟ್ಸ್‌‌ವೊಂದರಲ್ಲಿ ಕೆಲಸ ಮಾಡ್ತಿದ್ದಂತಹ ರವಿತೇಜ ಗೌರಮ್ಮಾ ಪರಿಶಿಷ್ಟ ಜಾತಿ ಎಂದು ಮದುವೆಯಾಗಿದ್ದ. ಸರ್ಕಾರದಿಂದ ಸಿಗುವ ಮೂರು ಲಕ್ಷ ರೂಪಾಯಿಯನ್ನೂ ಪಡೆದುಕೊಂಡಿದ್ದ. ಆದರೆ ಜಾತಿಯ ಹೆಸರಿನಲ್ಲಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತು ಗೌರಮ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (ದಿಗ್ವಿಜಯ ನ್ಯೂಸ್​)