ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ ಹಾಗೂ ಕಾಂಗ್ರೆಸ್ ಮುಖಂಡ ವಿಜಯ್ ಕುಲಕರ್ಣಿ ಅವರು ಇದ್ದ ಕಾರೂ ಬೈಕ್ಗಳಿಗೆ ಗುದ್ದಿದ ಹಿನ್ನೆಲೆಯಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ರಸ್ತೆ ಬದಿ ನಿಂತಿದ್ದ ಮೂರು ಬೈಕ್ಗಳಿಗೆ ವಿಜಯ್ ಅವರು ಇದ್ದ ಕಾರು ಡಿಕ್ಕಿಹೊಡೆದಿದೆ. ಈ ರಭಸಕ್ಕೆ ಕುಮಾರೇಶ್ವರನಗರದ ಚರಣ್ ಮೌನೇಶ್ವರ ನಾಯಕ (16) ಹಾಗೂ ಎತ್ತಿನಗುಡ್ಡದ ಶೇಖರ ಬಸಪ್ಪ ಹುದ್ದಾರ (37) ಅವರು ಮೃತಪಟ್ಟಿದ್ದಾರೆ. ಸಾಧನಕೇರಿಯ ಅರವಿಂದ ಮಲ್ಲನಗೌಡ ಪಾಟೀಲ ಎಂಬುವವರಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರಿನಲ್ಲಿ ವಿಜಯ್ ಸೇರಿದಂತೆ ಮೂವರು ಇದ್ದು, ಕಾರನ್ನು ಯಾರು ಚಲಾಯಿಸುತ್ತಿದ್ದರು ಎಂದು ಇನ್ನೂ ಬಹಿರಂಗಗೊಂಡಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇವರ ಕಾರು ಬೆಳಗಾವಿ ಕಡೆಯಿಂದ ಧಾರವಾಡಕ್ಕೆ ಬರುತ್ತಿತ್ತು. ಬೆಳಗಾವಿ ರಸ್ತೆಯ ಕೆವಿಜಿ ಬ್ಯಾಂಕ್ ಎದುರು ನಿಂತಿದ್ದ ಬೈಕ್ಗಳಿಗೆ ಕಾರು ಢಿಕ್ಕಿ ಹೊಡೆದಿದ್ದು ಈ ಅವಘಡ ಸಂಭವಿಸಿದೆ.