ಜಿಲ್ಲೆ

ಪರೀಕ್ಷೆ ಇಲ್ಲದೇ ಮಕ್ಕಳು ಪಾಸಾ? ಕಾಲೇಜುಗಳಿಗೆ 15 ದಿನ ರಜೆನಾ? 'ಸುತ್ತೋಲೆ'ಯ ಅಸಲಿಯತ್ತೇನು?

suchetana

ಬೆಂಗಳೂರು: ಕರೊನಾ ಎರಡನೆಯ ಅಲೆ ಶುರುವಾಗುತ್ತಿರುವ ಸುದ್ದಿಯಾಗುತ್ತಿದ್ದಂತೆಯೇ ಮಕ್ಕಳನ್ನು ಶಾಲಾ- ಕಾಲೇಜುಗಳಿಗೆ ಕಳುಹಿಸುವುದು ಹೇಗಪ್ಪಾ ಎಂಬ ಚಿಂತೆ ಪಾಲಕರಿಗೆ ಶುರುವಾಗಿದೆ. ಕೆಲ ವಾರಗಳ ಹಿಂದೆ ಶುರುವಾಗಿರುವ ಶಾಲಾ- ಕಾಲೇಜುಗಳಿಗೆ ಹೇಗೋ ಧೈರ್ಯ ಮಾಡಿ ಮಕ್ಕಳನ್ನು ಕಳಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಮತ್ತೆ ಮಹಾಮಾರಿಯ ಆರ್ಭಟ ಜೋರಾಗಿದೆ.

ಪಾಲಕರು ಹೀಗೆ ಭಯಪಡುತ್ತಿರುವ ನಡುವೆಯೇ ಕೆಲವು ಸಂದೇಶಗಳು, ಸರ್ಕಾರದ ಸುತ್ತೋಲೆಯಂತೆ ತೋರುವ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

1 ರಿಂದ 6ನೇ ಶಾಲೆಯ ಮಕ್ಕಳಿಗೆ ಪರೀಕ್ಷೆ ಇಲ್ಲದೇ ಪಾಸ್​ ಮಾಡಲು ಸರ್ಕಾರ ನಿರ್ಧರಿಸಿದ್ದು, ಈ ಕುರಿತು ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ ಎಂದು ಶೇರ್​ ಆಗುತ್ತಿದ್ದರೆ, ಕೆಲವು ಸಂದೇಶಗಳಲ್ಲಿ 1ರಿಂದ 9ನೇ ತರಗತಿಯವರೆಗಿನ ಮಕ್ಕಳಿಗೆ ಪರೀಕ್ಷೆ ಇಲ್ಲದೇ ಪಾಸ್​ ಎಂಬ ಸಂದೇಶ ಹರಿದಾಡುತ್ತಿವೆ.

ಇದರ ಮುಂದುವರೆದಿರುವ ಭಾಗವಾಗಿ ನಿನ್ನೆಯಿಂದ 15 ದಿನಗಳವರೆಗೆ ಕಾಲೇಜುಗಳಿಗೆ ರಜೆ, ಆದರೆ ಕಚೇರಿಗಳು ಎಂದಿನಂತೆಯೇ ಕಾರ್ಯನಿರ್ವಹಿಸಲಿವೆ ಎಂಬ ಸಂದೇಶ ಹರಿದಾಡುತ್ತಿದೆ. ಸಾಲದು ಎಂಬುದಕ್ಕೆ ಸರ್ಕಾರದ ಸುತ್ತೋಲೆಯನ್ನೇ ಹೋಲುವ ಸುತ್ತೋಲೆಯಲ್ಲಿ ಈ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನು ನಂಬಿ ಅನೇಕ ವಿದ್ಯಾರ್ಥಿಗಳು ನಲಿದಾಡುತ್ತಿದ್ದರೆ, ಇದು ನಿಜವೋ, ಸುಳ್ಳೋ ಎನ್ನುವುದು ತಿಳಿಯದೇ ಹಲವರು ಕನ್​ಫ್ಯೂಸ್​ನಲ್ಲಿದ್ದಾರೆ.

ಅಸಲಿಗೆ ಇವ್ಯಾವುವೂ ನೈಜ ಸುದ್ದಿಗಳಲ್ಲ. ಪರೀಕ್ಷೆ ಇಲ್ಲದೇ ಪಾಸು ಎಂಬ ಸುದ್ದಿಯ ಕುರಿತಾಗಿ ಇದಾಗಲೇ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರು ಸ್ಪಷ್ಟನೆ ನೀಡಿದ್ದು, ಇದು ಫೇಕ್​ ಸುದ್ದಿ, ಸರ್ಕಾರದಿಂದ ಇಂಥ ಆದೇಶ ಹೊರಟಿಲ್ಲ ಎಂದಿದ್ದಾರೆ. ಇದೀಗ ಶಿಕ್ಷಣ ಇಲಾಖೆಯ ನಿರ್ದೇಶಕರು ಸರ್ಕಾರದ ಸುತ್ತೋಲೆ ಹೋಲುವ ಸಂದೇಶದ ಕುರಿತು ಸ್ಪಷ್ಟನೆ ನೀಡಿದ್ದು, ಇದು ಅಸಲಿ ಸುತ್ತೋಲೆ ಅಲ್ಲ. ಸರ್ಕಾರದಿಂದ ಇಂಥ ಯಾವುದೇ ಆದೇಶ ಹೊರಟಿಲ್ಲ. ಇವುಗಳನ್ನು ಯಾರೂ ನಂಬಬಾರದು ಎಂದಿದ್ದಾರೆ.