ಜಿಲ್ಲೆ

ಸಿಂಧೂ ರೂಪೇಶ್‌ಗೆ ಜೀವ ಬೆದರಿಕೆ ಹಾಕಿದ್ದ ಯುವಕ ಅರೆಸ್ಟ್‌

ಮಂಗಳೂರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಇ -ಆಡಳಿತ ವಿಭಾಗದ ನಿರ್ದೆಶಕಿಯಾಗಿ ನಿನ್ನೆಯಷ್ಟೇ ವರ್ಗಾವಣೆಗೊಂಡಿರುವ ದಕ್ಷಿಣ ಕನ್ನಡ ನಿರ್ಗಮಿತ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಕ್ರಮವಾಗಿ ಜಾನುವಾರು ಸಾಗಾಣಿಕೆ ಮಾಡುವ ವೇಳೆಯಲ್ಲಿ ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳದೆ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಕಾನೂನನ್ನು ಉಲ್ಲಂಘಿಸಿ ಜಾನುವಾರು ಸಾಗಾಣಿಕೆ ಮಾಡುವ ವಾಹನ ಅಥವಾ ಜನರ ಮೇಲೆ ಹಲ್ಲೆ ನಡೆಸಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು.

ಇದರ ಬೆನ್ನಲ್ಲೇ ಇವರಿಗೆ ಜೀವಬೆದರಿಕೆ ಒಡ್ಡಲಾಗಿತ್ತು. ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುವವರ ಮೇಲೆ ಹಾಗೂ ಜಾನುವಾರು ರಕ್ಷಣೆ ಬರುವ ಜನರ ಮೇಲೆ ಹಲ್ಲೆ ನಡೆಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ಇವರು ಹೇಳಿದ ಬೆನ್ನಲ್ಲೇ ‘ರಾಮ್ ಸೇನಾ ಅಭಿಮಾನಿ ಬಳಗ’ ಎನ್ನುವ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ‘ಇವಳನ್ನು ಕೊಲ್ಲಬೇಕು’ ಎಂದು ತುಳುಭಾಷೆಯಲ್ಲಿ ಬೆದರಿಕೆ ಬಂದಿತ್ತು.

ಈ ಸುದ್ದಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದಂತೆಯೇ ಪೊಲೀಸರು ಆರೋಪಿಯ ಬೆನ್ನುಹತ್ತಿ ಹೋಗಿದ್ದರು. ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಮೂಡುಬಿದಿರೆ ಪೊಲೀಸರು ಆರೋಪಿಗಾಗಿ ಜಾಲ ಬೀಸಿದ್ದರು.

ಇದೀಗ ಯುವಕ ಸಿಕ್ಕಿಬಿದ್ದಿದ್ದಾನೆ. ಈ ಯುವಕನನ್ನು ಮೂಡುಬಿದಿರೆಯ ಬಡಗು ಮಿಜಾರು ನಿವಾಸಿ ರಂಜಿತ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಈ ನಡುವೆಯೇ ನಿನ್ನೆಯಷ್ಟೇ ಸರ್ಕಾರ 13 ಮಂದಿ ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಅವರಲ್ಲಿ ಸಿಂಧೂ ಕೂಡ ಒಬ್ಬರು.