ಜಿಲ್ಲೆ

ಎಸ್​ಡಿಎಂ ಸಂಸ್ಥೆಯ ಉಪಾಧ್ಯಕ್ಷ ಡಾ.ವಜ್ರಕುಮಾರ ಇನ್ನಿಲ್ಲ: ಧಾರವಾಡದಲ್ಲಿ ಕೊನೆಯುಸಿರು

suchetana

ಧಾರವಾಡ: ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ, ಎಸ್​ಡಿಎಂ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಡಾ. ನ. ವಜ್ರಕುಮಾರ ಇಂದು ಬೆಳಗಿನ ಜಾವ ಇಹಲೋಕ ತ್ಯಜಿಸಿದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಕಳೆದ ಹಲವಾರು ತಿಂಗಳಿಂದ‌ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಮೂಲತಃ ಉಡುಪಿ ತಾಲೂಕು ಯರ್ಮಾಳ ಗ್ರಾಮದವರಾಗಿದ್ದ ಅವರು ಸದ್ಯ ಧಾರವಾಡ ಯಾಲಕ್ಕಿ ಶೆಟ್ಟರ ಕಾಲೋನಿ ನಿವಾಸಿಯಾಗಿದ್ದರು. ತಮ್ಮ ಕೊನೆಯ ಕ್ಷಣಗಳವರೆಗೂ ಎಸ್​ಡಿಎಂ ಸಂಸ್ಥೆ ಅಭಿವೃದ್ಧಿಗೆ ಶ್ರಮಿಸಿದ್ದರು.

ಪ್ರಾಥಮಿಕ ಶಿಕ್ಷಣ ಉಡುಪಿ ತಾಲೂಕಿನ ಮುಲ್ಕಿಯಲ್ಲಿ ಪ್ರೌಢ ಶಿಕ್ಷಣ ಕಲ್ಯಾಣಪುರದ ಮಿಲ್ಲಿಗ್ರಿಸ್ ಹೈಸ್ಕೂಲನಲ್ಲಿ ಪೂರೈಸಿದ ಅವರು, ಉಡುಪಿಯ ಮಹಾತ್ಮಾಗಾಂಧಿ ಮೆಮೊರಿಯಲ್ ಕಾಲೇಜಿನಲ್ಲಿ ಪದವಿ ಹಾಗೂ ಸೊಲ್ಲಾಪುರದ ದಯಾನಂದ ಕಾಲೇಜಿನಲ್ಲಿ ಸ್ನಾತಕೋತ್ತರ ಶಿಕ್ಷಣ ಮುಗಿಸಿದ್ದರು.

1962ರಿಂದ 1973ರ ವರೆಗೆ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ನಿರ್ವಹಿಸಿದ ಅವರು ಬಳಿಕ ಧಾರವಾಡದ ಜೆಎಸ್ಎಸ್ ಕಾಲೇಜಿನಲ್ಲಿ ರೀಡರ್ ಬಳಿಕ ಉಪಪ್ರಾಚಾರ್ಯ, ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಜೆಎಸ್ಎಸ್ ಮತ್ತು ಎಸ್​ಡಿಎಂ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅವರು, ಎರಡು ಸಂಸ್ಥೆಗಳ ಬೆಳವಣಿಗೆಯಲ್ಲಿ ತಮ್ಮ ಅಪಾರ ಕೊಡುಗೆ ನೀಡಿದ್ದರು.

ಮೃತರ ಅಂತಿಮ ದರ್ಶನಕ್ಕೆ ಜೆಎಸ್ಎಸ್ ಕ್ಯಾಂಪಸ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿವಿಧ ಗಣ್ಯರು ಮಾತ್ರವಲ್ಲದೇ ಸಂಸ್ಥೆಗಳ ಪದಾಧಿಕಾರಿಗಳು, ಸಿಬ್ಬಂದಿ ಅಂತಿಮ ದರ್ಶನ ಪಡೆದರು. ಅವರ ಅಂತಿಮ ಸಂಸ್ಕಾರ ಹುಟ್ಟುರಾದ ಯರ್ಮಾಳು ಗ್ರಾಮದಲ್ಲಿ ನೆರವೇರಲಿದೆ. (ದಿಗ್ವಿಜಯ ನ್ಯೂಸ್​)