ಜಿಲ್ಲೆ

ಇದೇ 23ರಿಂದ ಹೈಸ್ಕೂಲ್​, ಪಿಯುಸಿ ಆರಂಭ ನಿಶ್ಚಿತ: ಸೋಂಕಿನ ಸಂಖ್ಯೆ ಹೆಚ್ಚಾದರೆ ಸ್ಕೂಲ್​ ಬಂದ್​- ಸಚಿವರು ಹೇಳಿದ್ದೇನು?

suchetana

ಬೆಂಗಳೂರು: ಇದೇ 23ರಿಂದ 8 ರಿಂದ 12ನೇ ತರಗತಿ ಶಾಲೆಗಳು ಆರಂಭವಾಗುತ್ತದೆಯೋ, ಇಲ್ಲವೋ ಎಂಬ ಬಗ್ಗೆ ಇರುವ ವಿವಾದಕ್ಕೆ ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರೆ ಎಳೆದಿದ್ದರು.

ಇದರ ಬೆನ್ನಲ್ಲೇ ಇಂದು ಕೂಡ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಮಾತನಾಡಿ, 23ರಿಂದ 8 ರಿಂದ 12ನೇ ತರಗತಿಯ ಶಾಲೆಗಳು ಖಂಡಿತವಾಗಿಯೂ ಶುರುವಾಗುತ್ತದೆ, ಇದರಲ್ಲಿ ಸಂಶಯವೇ ಬೇಡ ಎಂದಿದ್ದಾರೆ.
ಶೇ.2ಕ್ಕಿಂತ ಕಡಿಮೆ ಕರೊನಾ ವೈರಸ್​ ರೇಟ್​ ಇರುವಲ್ಲಿ ಶಾಲೆ ಆರಂಭಿಸಲಾಗುತ್ತಿದೆ. ಆರಂಭಕ್ಕೆ ಇನ್ನೂ ಒಂದು ವಾರ ಇರುವ ಕಾರಣ, ಆಯಾ ಭಾಗಗಳ ಪಾಸಿಟಿವ್​ ರೇಟ್​ ನೋಡಲಾಗುವುದು. ಒಂದು ವೇಳೆ ಶಾಲೆ ಆರಂಭದ ನಂತರ ಶಾಲೆ-ಕಾಲೇಜಿನಲ್ಲಿ ಅಥವಾ ಇದರ ವ್ಯಾಪ್ತಿಯಲ್ಲಿ ಶೇ.2ಕ್ಕಿಂತ ಹೆಚ್ಚು ಕರೊನಾ ರೇಟ್​ ಬಂದರೆ ಆಗ ಅಂಥ ಶಾಲೆ- ಕಾಲೇಜನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಪಾಲಕರು ಹೆದರದೇ ಮಕ್ಕಳನ್ನು ಶಾಲಾ- ಕಾಲೇಜಿಗೆ ಕಳುಹಿಸಿ ಎಂದಿದ್ದಾರೆ. ಈ ಕುರಿತು ಸೋಮವಾರ (ಆ.16) ಮಾರ್ಗಸೂಚಿ ಹೊರಡಲಿದೆ. 

ಅಲ್ಲಿಗೆ 9-12ನೇ ತರಗತಿಗಳು ಆರಂಭವಾಗುವುದು ಖಚಿತವಾಗಿದೆ. ಕರೊನಾದ ಈ ಸಮಯದಲ್ಲಿ ಶಾಲೆ ತೆರೆಯುವುದು ರಿಸ್ಕ್​ ಎಂದು ತಿಳಿದಿದ್ದರೂ ಹಲವಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಗಮನಿಸಿ ಇಂಥ ತೀರ್ಮಾನ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದಿದ್ದಾರೆ. ತರಗತಿಗಳಿಗೆ ವಿದ್ಯಾರ್ಥಿಗಳು ಬರಬಹುದು ಇಲ್ಲವೇ ಆನ್​ಲೈನ್​ ಕ್ಲಾಸ್​ ಕೂಡ ತೆಗೆದುಕೊಳ್ಳಬಹುದು, ಈ ಕುರಿತು ವಿದ್ಯಾರ್ಥಿಗಳು ಮತ್ತು ಪಾಲಕರ ವಿವೇಚನೆಗೆ ಬಿಟ್ಟಿದ್ದು, ಆದ್ದರಿಂದ ಆನ್​ಲೈನ್​ ಮತ್ತು ಆಫ್​ಲೈನ್​ ಎರಡೂ ತರಗತಿಗಳು ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಆದರೆ ಈ ನಡುವೆಯೇ 1 ರಿಂದ 8ನೇ ತರಗತಿಯವರೆಗೂ ಶಾಲೆಗಳು ತೆರೆಯುವುದಕ್ಕೆ ಸರ್ಕಾರ ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ನಾಗೇಶ್​ ಅವರು, ಮಕ್ಕಳಿಗೆ ಯಾವುದೇ ಕರೊನಾ ಭೀತಿ ಇಲ್ಲ ಎಂದು ಹಲವಾರು ತಜ್ಞರು ಹೇಳಿದ್ದಾರೆ. ಶಾಲೆ ಆರಂಭ ಮಾಡಲು ಕೂಡ ಅವರು ಅನುಮತಿ ನೀಡಿದ್ದಾರೆ. ಆದರೆ ಸಾಧಕ ಬಾಧಕಗಳನ್ನು ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ನಾಗೇಶ್​ ಹೇಳಿದ್ದಾರೆ.

ಮೊದಲಿಗೆ 5-8ನೇ ತರಗತಿ ಹಾಗೂ ನಂತರ ಕ್ರಮೇಣವಾಗಿ 1-4ನೇ ತರಗತಿಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ಆ.30ರಂದು ಸಭೆ ನಡೆಯಲಿದ್ದು, ಅಲ್ಲಿ ತೀರ್ಮಾನಿಸಲಾಗುವುದು ಎಂದಿದ್ದಾರೆ.
ಆದರೆ ಮಕ್ಕಳ ತಜ್ಞರಾಗಿರುವ ಡಾ.ಸಿ.ಮಂಜುನಾಥ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಶೀಘ್ರದಲ್ಲಿ ಶಾಲೆ ತೆರೆಯುವುದು ಉಚಿತವಲ್ಲ, ಕೆಲವು ಜಿಲ್ಲೆಗಳಲ್ಲಿ ಕರೊನಾ ಅಧಿಕ ಸಂಖ್ಯೆಯಲ್ಲಿ ಇದ್ದು, ಅವುಗಳ ಪ್ರಮಾಣವನ್ನು ಆಧರಿಸಿ ತೀರ್ಮಾನ ತೆಗೆದುಕೊಳ್ಳಬೇಕಿದೆ, ಎಲ್ಲಾ ಜಿಲ್ಲೆಗಳಿಗೂ ಒಂದೇ ತೆರನಾದ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ. ​ ತರಗತಿ ಇಲ್ಲದೆಯೇ ಮಕ್ಕಳು ಓದುವುದನ್ನೇ ಮರೆತಿದ್ದಾರೆ, ಕೂಡಲೇ ಶಾಲೆ ಆರಂಭಿಸಬೇಕು ಎಂದು ಸಚಿವ ಬಸವರಾಜ್​ ಹೊರಟ್ಟಿ ಹೇಳಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ಮತ್ತು ತಜ್ಞರ ನಡುವೆಯೇ ಗೊಂದಲ ಏರ್ಪಟ್ಟಿದ್ದು, ಶಾಲೆ- ಕಾಲೇಜು ತೆರೆಯುವ ಬಗ್ಗೆ ಇನ್ನಷ್ಟೇ ಸ್ಪಷ್ಟ ಉತ್ತರ ಬರಬೇಕಿದೆ.