ಜಿಲ್ಲೆ

ಸಚಿವಗಿರಿ ಇಲ್ಲದ್ದಕ್ಕೆ ಶಾಸಕ ಸ್ಥಾನದ ಮೇಲೆ ಮುನಿಸು: ಜಾರಕಿಹೊಳಿ ರಾಜೀನಾಮೆ?

suchetana

ಬೆಂಗಳೂರು: ಸಿಡಿ ಕೇಸ್‌ನಲ್ಲಿ ಸಿಲುಕಿ ಸಚಿವ ಸ್ಥಾನವನ್ನು ಕಳೆದುಕೊಂಡಿರುವ ರಮೇಶ್‌ ಜಾರಕಿಹೊಳಿ ಅವರಿಂದ ಈಗ ಹೊಸ ಬೆಳವಣಿಗೆ ಕಂಡುಬಂದಿದೆ. ಪುನಃ ಸಚಿವ ಸ್ಥಾನ ಸಿಗದೇ ಇರುವ ಕಾರಣದಿಂದ ಅವರು ರಾಜೀನಾಮೆಗೆ ಮುಂದಾಗಿರುವುದಾಗಿ ಮೂಲಗಳು ಹೇಳಿವೆ.

ರಾಜ್ಯದ ಉಸ್ತುವಾರಿ ಅರುಣ್‌ ಸಿಂಗ್‌ ಅವರು ರಾಜ್ಯಕ್ಕೆ ಬಂದು ಹೋದ ಮೇಲೆ ಮುಂಬೈಗೆ ತೆರಳಿದ್ದ ಜಾರಕಿಹೊಳಿ ಅವರು ಅದಾಗಲೇ ಭಾರಿ ಸುದ್ದಿಮಾಡಿದ್ದರು. ಸಿಡಿ ಪ್ರಕರಣ ಮುಗಿದರೆ ಪುನಃ ಸಚಿವ ಸಂಪುಟ ಸೇರುವ ಅವರ ಕನಸೂ ಸದ್ಯ ಈಡೇರುವಂತೆ ಕಾಣುತ್ತಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಜಾರಕಿಹೊಳಿ, ಇತ್ತೀಚಿನ ಬೆಳವಣಿಗೆಯಿಂದಾಗಿ ತಮ್ಮ ಕನಸಾಗಿರುವ ಜಲಸಂಪನ್ಮೂಲ ಖಾತೆ ಸಿಗುವುದಿಲ್ಲ ಎಂದು ನಿರ್ಧಾರ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಮ್ಮ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ತಮ್ಮದೇ ಪ್ರಮುಖ ಪಾತ್ರವಿದ್ದರೂ ತಮಗೆ ಹೀಗೆ ಆಗುತ್ತಿದೆ ಎನ್ನುವುದು ಅವರ ಅಸಮಾಧಾನ ಎನ್ನಲಾಗುತ್ತಿದೆ. ರಾಜೀನಾಮೆ ಒಂದು ಬೆದರಿಕೆಯಷ್ಟೇ. ಒತ್ತಡ ತಂತ್ರದ ಮೂಲಕ ಗಮನ ಸೆಳೆಯುವುದು ಅವರ ಉದ್ದೇಶವೆಂದೂ ಚರ್ಚೆಯಾಗುತ್ತಿದೆ. ಒಟ್ಟಿನಲ್ಲಿ ಈ ಬೆಳವಣಿಯಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಸದ್ಯ ಇನ್ನೊಂದು ತಲೆನೋವು ಶುರುವಾದಂತಿದೆ.