ಬೆಂಗಳೂರು: ರಾಜ್ಯದ ಹಲವೆಡೆ ಅಬ್ಬರಿಸುತ್ತಿರುವ ಮಳೆ ಮುಂದಿನ 5 ದಿನ ಇನ್ನಷ್ಟು ಚುರುಕುಗೊಳ್ಳಲಿದೆ. ಭಾನುವಾರವೂ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಕಲಬುರಗಿಯಲ್ಲಿ 90 ಮಿಮೀ ಮಳೆ ಬಿದ್ದಿದೆ.
ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನದಲ್ಲಿ ಆ.2ರಿಂದ ಮುಂದಿನ 3 ದಿನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಆ.3, 4ರಂದು ಹಾಗೂ ಮಂಡ್ಯ ಮತ್ತು ರಾಮನಗರದಲ್ಲಿ ಆ.4 ರಂದು ಭಾರಿ ಮಳೆ ಬೀಳುವ ಮುನ್ಸೂಚನೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ 115 ಮಿಮೀನಿಂದ 204 ಮಿಮೀವರೆಗೆ ಮಳೆಯಾಗುವ ಸಾಧ್ಯತೆ ಇದೆ.
ಧಾರವಾಡ, ಗದಗ, ಬಳ್ಳಾರಿ, ಮಂಡ್ಯ, ರಾಮನಗರದಲ್ಲಿ ಆ.2ರಿಂದ ಮುಂದಿನ 2 ದಿನ ಹಾಗೂ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ, ಚಾಮರಾಜನಗರ, ಮೈಸೂರು, ಬಾಗಲಕೋಟೆ, ವಿಜಯಪುರ ಮತ್ತು ಕಲಬುರಗಿಯಲ್ಲಿ ಆ.4ರಂದು ಯೆಲ್ಲೋ ಅಲರ್ಟ್ ಇರಲಿದೆ. ಉಳಿದಡೆ ಚದುರಿದಂತೆ ಸಾಧಾರಣ ಮಳೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಮಳೆ ಅಬ್ಬರ: ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 4 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಶನಿವಾರ ರಾತ್ರಿಯಿಡಿ ಮತ್ತು ಭಾನುವಾರ ಸರಾಸರಿ 70 ಮಿಮೀ ಮಳೆಯಾಗಿದೆ. ಆ.4ರಂದು ಬೆಂಗಳೂರಿನಲ್ಲಿ ಹೆಚ್ಚು ಮಳೆ ಬೀಳುವ ಹಿನ್ನೆಲೆಯಲ್ಲಿ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.