ಜಿಲ್ಲೆ

ರಾಯಚೂರು ಯುವತಿಯ ಖತರ್ನಾಕ್​ ಪ್ಲ್ಯಾನ್​ : ಲವರ್ ​ ಜತೆಸೇರಿ ಭಾವಿಪತಿಯನ್ನೇ ಮುಗಿಸಿದಳು!

suchetana

ರಾಯಚೂರು: ಕೆಲ ವರ್ಷಗಳ ಹಿಂದೆ ಪ್ರಸಿದ್ಧ ವಕೀಲರೊಬ್ಬರ ಮಗಳು ವಕೀಲೆ ಶುಭಾ ಎಂಬಾಕೆಯ ಸುದ್ದಿ ಭಾರಿ ಸದ್ದು ಮಾಡಿತ್ತು. ಖುಷಿಯಿಂದ ಎಂಗೇಜ್​ಮೆಂಟ್​ ಮಾಡಿಕೊಂಡು ಕೊನೆಗೆ ಪ್ರೇಮಿಯ ಜತೆಗೂಡಿ ಭಾವಿಪತಿಯನ್ನೇ ಕೊಲೆ ಮಾಡಿಬಿಟ್ಟಿದ್ದಳು. ಇದು ನಂತರ ಚಲನಚಿತ್ರ ಕೂಡ ಆಗಿತ್ತು.

ಶುಭಾ ಈಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಇದೀಗ ಅದೇ ರೀತಿ ರಾಯಚೂರು ಜಿಲ್ಲೆಯಲ್ಲಿ ಇನ್ನೊಂದು ಭಯಾನಕ ಘಟನೆ ನಡೆದಿದೆ. ಇಲ್ಲಿ ಕೂಡ ಯುವತಿಯೊಬ್ಬಳು ಮನಃಪೂರ್ವಕವಾಗಿ ಯುವಕನ ಜತೆ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾಳೆ. ಆಮೇಲೆ ನೋಡಿದರೆ ಪ್ರಿಯಕರನ ಜತೆಗೂಡಿ ಭಾವಿಪತಿಯ ಕೊಲೆ ಮಾಡಿ ಇದೀಗ ಸಿಕ್ಕಿಬಿದ್ದಿದ್ದಾಳೆ.

ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ 30 ವರ್ಷದ ಯುವಕ ಮೆಹಬೂಬ್ ಕೊಲೆಯಾದವ. ಈತನನ್ನು ಕೊಲೆ ಮಾಡಿರುವ ಆರೋಪ ಹೊತ್ತಾಕೆ ಸಿರವಾರ ಪಟ್ಟಣದ ಮೆಹಬೂಬ್‍ಗೆ ರೋಡಲಬಂಡಾ ಗ್ರಾಮದ ಖಾಜಾಬಿ, 15 ದಿನಗಳ ಹಿಂದೆ ಈ ಕೊಲೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ. ಮೆಹಬೂಬ್​ನ ಮೃತದೇಹ ಜಮೀನೊಂದರಲ್ಲಿ ಪತ್ತೆಯಾಗಿದೆ.

ಖಾಜಾಬಿ ಮತ್ತು ಶಬ್ಬೀರ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಖಾಜಾಬಿ ಎಂಗೇಜ್​ಮೆಂಟ್​ ಮೆಹಬೂಬ್​ ಜತೆ ಆಯಿತು. ನಿಶ್ಚಿತಾರ್ಥದ ವೇಳೆ ಖಾಜಾಬಿ ಬಹಳ ಖುಷಿಯಲ್ಲಿ ಇರುವಂತೆಯೇ ಕಂಡಿದ್ದಳು. ಆದರೆ ಅದೇನಾಯಿತೋ ಗೊತ್ತಿಲ್ಲ. ಮದುವೆ ನಿಶ್ಚಯವಾದ ಮೇಲೆ ಶಬ್ಬೀರ್ ಮೆಹಬೂಬ್​ನನ್ನು ಮುಗಿಸೋ ಪ್ಲ್ಯಾನ್​ ಮಾಡಿದ. ಅದಕ್ಕಾಗಿ ತನ್ನ ಸ್ನೇಹಿತರ ಜತೆ ಸೇರಿ ಸಂಚುರೂಪಿಸಿದ. ಇದಕ್ಕೆ ಮುಖ್ಯವಾಗಿ ಖಾಜಾಬಿ ಸಹಕಾರ ನೀಡಿದ್ದಾಳೆ ಎಂಬ ಆರೋಪವಿದೆ.

ಕಳೆದ ನವೆಂಬರ್​ ಎರಡನೆಯ ವಾರ ಸಿರವಾರಕ್ಕೆ ಬಂದ ಶಬ್ಬೀರ್, ರೆಡಿಯೋ ಅಂಗಡಿಯ ಬಳಿ ಕುಳಿತಿದ್ದ ಮೆಹಬೂಬ್​ನನ್ನು ಪುಸಲಾಯಿಸಿ ಬೈಕ್​ನಲ್ಲಿ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆತನ ಸ್ನೇಹಿತರಾದ ಚಂದ್ರು, ಫಯಾಜ್​ನನ್ನು ಕರೆಸಿಕೊಂಡು ಕಂಠೊಪೂರ್ತಿ ಕುಡಿಸಿದ್ದಾನೆ. ನಂತರ ಸ್ನೇಹಿತರ ಜತೆಗೂಡಿ ರೋಡಲಬಂಡಾ ಗ್ರಾಮಕ್ಕೆ ಕರೆದುಕೊಂಡು ಹೋಗಿ ಹೊಲ ಒಂದರಲ್ಲಿ ಟವಲ್​ನಿಂದ ಉಸಿರುಗಟ್ಟಿ ಕೊಲೆ ಮಾಡಿದ್ದಾರೆ. ಅಲ್ಲಿಯೇ ಆತನನ್ನು ಹೂತು ಹಾಕಿದ್ದಾರೆ.

ಎಂಗೇಜ್​ಮೆಂಟ್​ ಮಾಡಿಕೊಂಡ ಮಗ ನಾಪತ್ತೆಯಾಗಿರುವುದು ಆತನ ಪಾಲಕರ ಆತಂಕಕ್ಕೆ ಕಾರಣವಾಯಿತು. ಹುಡುಕಿ ಹುಡುಕಿ ಸಾಕಾಗಿ ಪೊಲೀಸ್​ ಕಂಪ್ಲೇಂಟ್​ ಕೊಟ್ಟರು. ಇದಾಗಿದ್ದು ನವೆಂಬರ್​ 18ರಂದು. ನಂತರ ತನಿಖೆ ಕೈಗೊಂಡ ಪೊಲೀಸರಿಗೆ 28ರಂದು ಕೊಲೆಯಾಗಿರುವುದು ತಿಳಿದಿದೆ. ನಂತರ ಪ್ರಕರಣ ಭೇದಿಸಿದಾಗ ಸತ್ಯ ಬಯಸಲಾಗಿದೆ.

ಸದ್ಯ ಸಿರವಾರ ಪೊಲೀಸರು ಖಾಜಾಬಿ ಹಾಗೂ ಶಬ್ಬೀರ್​ನನ್ನು ಬಂಧಿಸಿದ್ದಾರೆ. ಚಂದ್ರು ಹಾಗೂ ಫಯಾಜ್ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಿದ್ದಾರೆ.