ಜಿಲ್ಲೆ

ಬೆಂಗಳೂರು, ಮೈಸೂರಿಗೆ ಪ್ರಧಾನಿ ಮೋದಿ: ಕೆಲ ಕಾಲೇಜುಗಳಿಗೆ ರಜೆ ಘೋಷಣೆ- ಇಲ್ಲಿದೆ ವಿವರ...

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಾಳೆ (ಸೋಮವಾರ) ಬೆಂಗಳೂರಿಗೆ ಆಗಮಿಸಲಿದ್ದು, ಅಲ್ಲಿಂದ ಮೈಸೂರಿಗೆ ತೆರಳಲಿದ್ದಾರೆ. ಜೂನ್​ 19ರ ಮಧ್ಯಾಹ್ನ 2.30ಕ್ಕೆ ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನೆ ಹಾಗೂ ಮೇಲ್ದರ್ಜೆಗೇರಿಸಲ್ಪಟ್ಟ 150 ಐಟಿಐಗಳ ಲೋಕಾರ್ಪಣೆ ಮಾಡಲಿದ್ದಾರೆ. 4 ಗಂಟೆಗೆ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಲಿದ್ದಾರೆ.

ಬೆಳಗ್ಗೆ 11.45ಕ್ಕೆ ವಿಶೇಷ ವಿಮಾನದ ಮೂಲಕ ಯಲಹಂಕ ವಾಯುನೆಲೆಗೆ ಆಗಮಿಸಲಿದ್ದಾರೆ. ಬಳಿಕ ಹೆಲಿಕ್ಯಾಪ್ಟರ್ ಮೂಲಕ ಕೊಮ್ಮಘಟ್ಟ​​ಗೆ ಬಂದು ಮಧ್ಯಾಹ್ನ 12.30 ರಿಂದ 1.45 ರವರೆಗೆ ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಹಾಗೂ ರೈಲ್ವೆ ಸಂಚಾರ ಯೋಜನೆ ಮತ್ತು ಬಹು ಮಾದರಿ ಲಾಜಿಸ್ಟ್ರಿಕ್ ಪಾರ್ಕ್​ಗೆ ಪ್ರಧಾನಿ ಶಂಕುಸ್ಥಾಪನೆ ಮಾಡಲಿದ್ದಾರೆ.

ಸಂಜೆ 5 ಗಂಟೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಐಐಎಸ್ ಹೆಚ್ ಎಕ್ಸಲೆನ್ಸ್ ಸೆಂಟರ್ ಲೋಕಾರ್ಪಣೆ ನಂತರ ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ಸಂವಾದ ನಡೆಸಲಿದ್ದಾರೆ. ಸಂಜೆ 6.30ಕ್ಕೆ ಸುತ್ತೂರು ಮಠಕ್ಕೆ ಭೇಟಿ ನೀಡಿ ವೇದ ಪಾಠಶಾಲಾ ಕಟ್ಟಡ ಉದ್ಘಾಟಿಸಲಿದ್ದಾರೆ. ರಾತ್ರಿ 7:30ಕ್ಕೆ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದು ನಂತರ ಮೈಸೂರಿನ ಖಾಸಗಿ ಹೋಟೆಲ್​​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಈ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ಬೆಂಗಳೂರಿನ ಕೆಲವೊಂದು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಎಲ್ಲೆಲ್ಲಿ ರಜೆ?
ಪ್ರಧಾನಿಯವರು ತೆರಳಲಿರುವ ಮಾರ್ಗಗಳಾದ ಬೆಂಗಳೂರಿನ ಐಐಎಸ್ಸಿ, ಗೊರಗುಂಟೆ ಪಾಳ್ಯ, ಸಿಎಂಟಿಐ, ವರ್ತುಲ ರಸ್ತೆ, ಡಾ.ರಾಜ್‌ಕುಮಾರ್ ಸ್ಮಾರಕ ಮೇಲ್ಸೇತುವೆ, ಲಗ್ಗೆರೆ ಸೇತುವೆ, ನಾಯಂಡಹಳ್ಳಿ, ಮೈಸೂರು ರಸ್ತೆ ಆರ್.ವಿ.ಕಾಲೇಜು, ನಾಗರಬಾವಿ, ಸುಮನಹಳ್ಳಿ ಮೇಲ್ಸೇತುವೆ, ಎಂಇಐ ಜಂಕ್ಷನ್, ಗೋವರ್ಧನ್ ಚಿತ್ರಮಂದಿರ, ಯಶವಂತಪುರ ಮತ್ತು ಜಕ್ಕೂರು ವಿಮಾನ ನಿಲ್ದಾಣ ಮಾರ್ಗಗಳ ಸುತ್ತಮುತ್ತಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ರಜೆ ಅನ್ವಯವಾಗಲಿದೆ.

ಯಲಹಂಕ ವಾಯುನೆಲೆಯಿಂದ ಕೊಮ್ಮಘಟ್ಟ ಮತ್ತು ಕೊಮ್ಮಘಟ್ಟದಿಂದ ಬೇಸ್ ಕ್ಯಾಂಪಸ್​ಗೆ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಷೋ ನಡೆಸಲು ಬಿಜೆಪಿ ಅನುಮತಿ ಕೋರಿತ್ತು. ಆದರೆ ಭದ್ರತೆಯ ದೃಷ್ಟಿಯಿಂದ ಪ್ರಧಾನಿ ಮೋದಿಯವರ ರೋಡ್​ ಷೋ ರದ್ದಾಗಿದೆ. ಅವರು ರಸ್ತೆ ಮಾರ್ಗದ ಬದಲು ವಾಯುಮಾರ್ಗದಲ್ಲೇ ಅಂದರೆ ಹೆಲಿಕಾಪ್ಟರ್​ ಮೂಲಕ ವೇದಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಮಾತ್ರವಲ್ಲದೇ ಬೆಂಗಳೂರಿನ ಕಾರ್ಯಕ್ರಮಗಳಿಗೆ ರಸ್ತೆ ಮಾರ್ಗದಲ್ಲಿ ತೆರಳದೆ ವಾಯುಮಾರ್ಗದಲ್ಲೇ ತೆರಳಲು ವ್ಯವಸ್ಥೆ ಮಾಡಿದೆ. ಒಂದು ಕಾರ್ಯಕ್ರಮದಿಂದ ಮತ್ತೊಂದು ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕವೇ ಪ್ರಯಾಣಿಸಲಿದ್ದಾರೆ.