ಜಿಲ್ಲೆ

ಮದುವೆ ಕ್ಯಾನ್ಸಲ್​ ಮಾಡಿ ಸಿಂಗಲ್ಲಾಗಿ ಉಳಿದ ನರ್ಸ್​ಗೆ ಒಲಿದು ಬಂತು ಫ್ಲಾರೆನ್ಸ್ ನೈಟಿಂಗೆಲ್​ ಪ್ರಶಸ್ತಿ

ಬೆಂಗಳೂರು: ನಗರದ ಸಿ.ವಿ.ರಾಮನ್​ ಆಸ್ಪತ್ರೆಯಲ್ಲಿ ನರ್ಸ್​ ಆಗಿರುವ ನವೀನ್​ ರಾಜ್​ ಅವರಿಗೆ ಈ ಬಾರಿಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿಯ ಲಭಿಸಿದೆ. ಇದಕ್ಕೆ ಕಾರಣ ಇವರು ನಿಗದಿಯಾಗಿದ್ದ ಮದುವೆಯನ್ನು ಕ್ಯಾನ್ಸಲ್​ ಮಾಡಿ ಕರೊನಾ ರೋಗಿಗಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರು.

2020ರಲ್ಲಿ ನವೀನ್ ರಾಜ್ ಅವರ ಮದುವೆಗೆ ಸಿದ್ಧತೆ ನಡೆದಿತ್ತು. ಮನೆಯಲ್ಲಿ ಎಲ್ಲರೂ ಸಂಭ್ರಮದಲ್ಲಿ ಇದ್ದರು. ಆದರೆ ಈ ಸಮಯ ಕರೊನಾ ಬೆಚ್ಚಿಬೀಳಿಸಿದ್ದ ಸಮಯ. ಎಲ್ಲೆಲ್ಲೂ ಹೆಣಗಳ ರಾಶಿ. ವೈದ್ಯರು ಮತ್ತು ನರ್ಸ್​ಗಳ ಜೀವನವೂ ಅಕ್ಷರಶಃ ನರಕಮಯವಾಗಿತ್ತು. ಆದ್ದರಿಂದ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರ ನರಳಾಡುತ್ತಿರುವಾಗಿ ತಾವು ಮದುವೆಯ ಸಂಭ್ರಮದಲ್ಲಿ ಇರುವುದು ಸರಿಯಲ್ಲ ಎಂದುಕೊಂಡ ನವೀನ್​, ಮದುವೆಯನ್ನೇ ಮುಂದೂಡಿದ್ದರು. ನಂತರ ಮದುವೆ ಕ್ಯಾನ್ಸಲ್​ ಆಗಿದ್ದರಿಂದ ಸದ್ಯ ಸಿಂಗಲ್​ ಆಗಿಯೇ ಉಳಿದಿದ್ದಾರೆ. ಕರೊನಾ ಸಮಯದಲ್ಲಿ ಇಂಥದ್ದೊಂದು ನಿರ್ಧಾರ ತೆಗೆದುಕೊಂಡು ರೋಗಿಗಳ ಆರೈಕೆ ಮಾಡಿದ್ದು ಅವರಿಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ತಂದುಕೊಟ್ಟಿದೆ.

ನಿನ್ನೆ (ಗುರುವಾರ) ನಡೆದ ಸಮಾರಂಭದಲ್ಲಿ 12 ಜನರಿಗೆ ಈ ಪ್ರಶಸ್ತಿ ನೀಡಲಾಗಿದ್ದು, ಅದರಲ್ಲಿ ನವೀನ್​ ಕೂಡ ಒಬ್ಬರು. ಕೋವಿಡ್ ಮೊದಲ ಮತ್ತು ಎರಡನೇ ಅಲೆಯಲ್ಲಿ ಕಂಡ ಭಯಾನಕ ದೃಶ್ಯಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಮಾಡಿದ ಸೇವೆಗಳ ಕುರಿತು ನವೀನ್​ ಮನಮುಟ್ಟುವಂತೆ ವಿವರಿಸಿದರು.

ಆ ಸಮಯದಲ್ಲಿ ನನ್ನ ಪಾಲಕರೂ ಅನಾರೋಗ್ಯಕ್ಕೆ ಒಳಗಾಗಿದ್ದರು. ಆಸ್ಪತ್ರೆಯಲ್ಲಿನ ಜವಾಜಬ್ದಾರಿ ಮತ್ತು ಅವರನ್ನು ನೋಡಿಕೊಳ್ಳುವ ಉದ್ದೇಶದಿಂದ ಮದುವೆ ಮಾಡಿಕೊಳ್ಳುವ ನಿರ್ಧಾರ ಮುಂದೂಡಿದೆ. ಕರೊನಾ ಸೋಂಕಿತರ ಆರೈಕೆಯಲ್ಲಿ ತೊಡಗಿದೆ ಎನ್ನುವ ನವೀನ್​, ಇದೀಗ ತಮಗಾಗಿ ಅಪ್ಪ-ಅಮ್ಮ ವಧು ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ನಾಚಿಕೆಯಿಂದ ಹೇಳುತ್ತಾರೆ.

ಇದೇ ಸಂದರ್ಭದಲ್ಲಿ ಅವರು ಎರಡನೇ ಅಲೆಯ ಭೀಕರತೆ ಕುರಿತು ವಿವರಿಸಿದರು. ಅದು ಇಂದಿಗೂ ನನ್ನನ್ನೂ ಕಾಡುತ್ತಿದೆ. 26 ವರ್ಷದ ಯುವಕನೋರ್ವ ನನ್ನ ಹೆಗಲ ಮೇಲೆಯೇ ಕುಸಿದು ಬಿದ್ದ. ಆ ಸಮಯದಲ್ಲಿ ದಿನಕ್ಕೆ 24 ಗಂಟೆ ಕೆಲಸ ಮಾಡುತ್ತಿದ್ದೆ. ಎರಡು ದಿನಗಳಿಗೊಮ್ಮೆ ಕೇವಲ 4 ಗಂಟೆ ಮಾತ್ರ ರೆಸ್ಟ್ ಮಾಡಲಾಗುತ್ತಿತ್ತು ಎಂದು ಹೇಳಿದರು. ನಾನು ಎಂದಿಗೂ ನನ್ನ ಫೋನ್ ಸ್ವಿಚ್ಛ್ ಆಫ್ ಮಾಡಿಲ್ಲ. ನನ್ನ ಫೋನ್ ಸ್ವಿಚ್ಛ್ ಆಫ್ ಆಗದರಲಿ ಎಂದು ಸೂಪರಿಂಟೆಂಡೆಂಟ್ ಪವರ್ ಬ್ಯಾಂಕ್ ನೀಡಿದ್ದನ್ನು ನವೀನ್ ಹೇಳಿ ತಮ್ಮ ಕಾರ್ಯವೈಖರಿ ಬಗ್ಗೆ ವಿವರಿಸಿದರು.