ಬೆಂಗಳೂರು: ಕರೊನಾ ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಇದಾಗಲೇ ಹಲವಾರು ರಾಜ್ಯಗಳಲ್ಲಿ ಲಾಕ್ಡೌನ್, ಕರ್ಫ್ಯೂ ಎಲ್ಲವನ್ನೂ ವಿಧಿಸಲಾಗಿದೆ. ಕರ್ನಾಟಕದಲ್ಲಿ ನಾಳೆಯಿಂದಲೇ ಅಂದರೆ ಸೋಮವಾರದಿಂದಲೇ ಲಾಕ್ಡೌನ್ ಆಗುತ್ತದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಇದಕ್ಕೆ ಸಮಜಾಯಿಷಿ ಕೊಟ್ಟಿರುವ ಆರೋಗ್ಯ ಸಚಿವ ಡಿ.ಸುಧಾಕರ್, ಸದ್ಯ ಯಾವುದೇ ಲಾಕ್ಡೌನ್ ಮಾಡುವುದಿಲ್ಲ. ಆದರೆ ಕಠಿಣ ನಿಮಯಾವಳಿಗಳನ್ನು ಜಾರಿಗೆ ತರಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಗೃಹಸಚಿವ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್ ಜೊತೆ ಸಭೆ ಮಾಡಿದ್ದೇವೆ. ನಾಳೆ ಈ ಕುರಿತು ಸಭೆ ಕರೆಯಲಾಗಿದೆ. ನಾಳೆಯ ಸಭೆಯ ಪೂರ್ವಭಾವಿಯಾಗಿ ಇಂದು ಅಧಿಕಾರಿಗಳ ಜೊತೆ ಸಭೆ ಮಾಡಲಾಯ್ತು ಎಂದರು.
ಬೆಂಗಳೂರು ಪರಿಸ್ಥಿತಿ, ಸ್ಥಿತಿಗತಿ ಬಗ್ಗೆ ಚರ್ಚೆ ಮಾಡಲಾಗಿದೆ. ಗೃಹ ಇಲಾಖೆಯಿಂದಲೂ ಮಾಹಿತಿ ಪಡೆಯಲಾಗಿದೆ. ವಿಪತ್ತು ನಿರ್ವಹಣೆ ಇಂದ ಹಣ ಬಿಡುಗಡೆ ಮಾಡಲಾಗಿದೆ. ನಾಳೆ ಸಂಸದರು, ಶಾಸಕರ ಜೊತೆ ಸಮಗ್ರವಾಗಿ ಸಭೆ ಮಾಡಲಾಗುವುದು. ಅದರಲ್ಲಿ ಅಭಿಪ್ರಾಯ ಸಂಗ್ರಹಿಸಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಕಳೆದ ವರ್ಷ ಲಾಕ್ಡೌನ್ನಿಂದಾಗಿ ಜನ ಊರಿಗೆ ಹೋದರು. ಇದರಿಂದಾಗಿ ಕರೊನಾ ಜಾಸ್ತಿ ಆಯಿತು. ಆದ್ದರಿಂದ ಈ ಬಾರಿ ಲಾಕ್ಡೌನ್ ಇಲ್ಲ. ಹಾಗೆಂದು ನಿಯಮವಿಲ್ಲವೆಂದೇನಲ್ಲ. ನಿಯಮಗಳನ್ನು ಇನ್ನಷ್ಟು ಬಿಗಿ ಮಾಡಲಾಗುತ್ತದೆ. ನಾಳೆ ಈ ಬಗ್ಗೆ ಸ್ಪಷ್ಟಪಡಿಸಲಾಗುವುದು ಎಂದು ಹೇಳಿದರು.