ಮೈಸೂರು: ಕರೊನಾ ಸೋಂಕು ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಲೇ ಸಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ಎಲ್ಲಾ ಹಬ್ಬಗಳ ಮೇಲೆ ಸೋಂಕಿನ ಕರಿನೆರಳು ಬಿದ್ದು ಖುಷಿಯನ್ನು ಕಸಿದುಕೊಂಡಿದೆ, ಇದೀಗ ಜಗದ್ವಿಖ್ಯಾತ ಮೈಸೂರು ದಸರಾ ಸರದಿ.
ಮೈಸೂರಿನಲ್ಲಿ ಸೋಂಕು ವಿಪರೀತ ಆಗಿಬಿಟ್ಟಿದೆ. ಬೇರೆ ಕಡೆಗಳಲ್ಲಿ ಹೋಲಿಸಿದರೆ ಮೈಸೂರು ಕರೊನಾ ಹಾಟ್ಸ್ಪಾಟ್ ಆಗುತ್ತಲೇ ಸಾಗಿದೆ. ಈ ಹಿನ್ನೆಲೆಯಲ್ಲಿ ಈ ವರ್ಷದ ಮೈಸೂರು ರಾಜವಂಶದ ಖಾಸಗಿ ದಸರಾಗೆ ಸಾರ್ವಜನಿಕರು ಹಾಗೂ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ.
ಸಾರ್ವಜನಿಕರಿಗೆ ನಿರ್ಬಂಧವಿದ್ದರೂ ಟಿ.ವಿಗಳ ಮೂಲಕ ಈ ದಸರಾವನ್ನು ಸವಿಯುವ ಅವಕಾಶವಿತ್ತು. ಆದರೆ ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಮಾಧ್ಯಮದವರಿಗೂ ನಿರ್ಬಂಧ ವಿಧಿಸಿರುವ ಕಾರಣ, ಖಾಸಗಿ ದಸರಾ ನೋಡುವ ಭಾಗ್ಯ ಈ ಬಾರಿ ಸಿಗುವುದಿಲ್ಲ.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಅವರು ಹೇಳಿರುವುದು ಇಷ್ಟು: ಮೈಸೂರಿನಲ್ಲಿ ಹೆಚ್ಚಿನ ಕೋವಿಡ್ ಪ್ರಕರಣಗಳ ದೃಷ್ಟಿಯಿಂದ ಅರಮನೆಯಲ್ಲಿ 2020ರ ಸಾಲಿನ ಶರನ್ನವರಾತ್ರಿ ಸಂದರ್ಭದಲ್ಲಿ ಪೂಜಾ ವಿಧಿವಿಧಾನಗಳನ್ನ ಸಾಂಪ್ರದಾಯಿಕವಾಗಿ ನಡೆಸಲಾಗುವುದು. ಮುನ್ನೆಚ್ಚರಿಕೆ ಕ್ರಮ ಅವಶ್ಯಕವಾಗಿರುವುದರಿಂದ ಆಚರಣೆಯಲ್ಲಿ ಕುಟುಂಬ ಸದಸ್ಯರನ್ನು ಒಳಗೊಂಡಂತೆ ಸಾರ್ವಜನಿಕರು ಹಾಗೂ ಮಾಧ್ಯಮಗಳು ಭಾಗವಹಿಸುವಿಕೆ ಇರುವುದಿಲ್ಲ. ಕರೊನಾ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ. ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸಹಕರಿಸಬೇಕು.