ಜಿಲ್ಲೆ

ವಾಹನ ಸವಾರರಿಗೆ ಗುಡ್‌ನ್ಯೂಸ್‌: ಆನ್‌ಲೈನ್‌ ಮೂಲಕ ಮೋಟಾರುಗಳ ನೋಂದಣಿ

suchetana

ಬೆಂಗಳೂರು: ಸಂಪೂರ್ಣವಾಗಿ ನಿರ್ಮಿತವಾಗಿರುವ ವಾಹನಗಳನ್ನು ಪ್ರಥಮ ಬಾರಿಗೆ ನೋಂದಣಿ ಮಾಡಲು ಪರಿವೀಕ್ಷಣೆಗಾಗಿ ನೋಂದಣಿ ಪ್ರಾಧಿಕಾರದ ಮುಂದೆ ಹಾಜರು ಪಡಿಸುವ ಅವಶ್ಯಕತೆ ಇನ್ನು ಮುಂದೆ ಇರುವುದಿಲ್ಲ. ಈ ಹಿಂದೆ ಹಾಜರು ಪಡಿಸಬೇಕಾಗಿದ್ದ ನಿಯಮವನ್ನು ಕೇಂದ್ರ ಮೋಟಾರು ವಾಹನ ನಿಯಮಾವಳಿಗೆ ತಿದ್ದುಪಡಿ ತಂದು ತೆಗೆದುಹಾಕಲಾಗಿದೆ.

ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಅಧಿಕೃತ ಮೋಟಾರು ವಾಹನಗಳನ್ನು ಪ್ರಾದೇಶಿಕ ಸಾರಿಗೆ ಕಚೇರಿಗೆ ಕೊಂಡೊಯ್ಯದೆ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

ಅಧಿಕೃತ ಮಾರಾಟಗಾರರಿಂದ ಮಾರಾಟ ಮಾಡಿದ ವಾಹನಗಳ ವಿವರಗಳನ್ನು ವಾಹನ್ -4 ಪೋರ್ಟ್‌ಲ್‌ನಲ್ಲಿ ಮಾರಾಟಗಾರರು (ಡೀಲರ್ಸ್‌) ನಮೂದಿಸಿ ನೋಂದಣಿಗೆ ತಗಲುವ ತೆರಿಗೆ ಮತ್ತು ಶುಲ್ಕಗಳನ್ನು ಆನ್‌ಲೈನ್ ಮೂಲಕ ಪಾವತಿಸಿ ಅರ್ಜಿಯನ್ನು ಆನ್‌ಲೈನ್ ಮುಖಾಂತರವೇ ಸಂಬಂಧಪಟ್ಟ ನೋಂದಣಿ ಪ್ರಾಧಿಕಾರಕ್ಕೆ ಸಲ್ಲಿಸಬಹುದಾಗಿದೆ.

ಆನ್‌ಲೈನ್‌ನಲ್ಲಿ ಸ್ವೀಕರಿಸಿದಂತಹ ಅರ್ಜಿಗಳನ್ನು ಆನ್‌ಲೈನ್‌ನಲ್ಲಿಯೇ ಪರಿಶೀಲಿಸಿ ನೋಂದಣಿ ಪ್ರಾಧಿಕಾರದಿಂದ ಅನುಮೋದನೆಗೊಳ್ಳುತ್ತದೆ ಹಾಗೂ ನೋಂದಣಿ ಕ್ರಮಾಂಕವನ್ನು ನೀಡಲಾಗುತ್ತದೆ. ಮಾಲೀಕರು ಮತ್ತು ಸಾರ್ವಜನಿಕರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಆಯುಕ್ತರು ತಿಳಿಸಿದ್ದಾರೆ.