ಜಿಲ್ಲೆ

ಡಿಕೆಶಿ ನಿವಾಸಕ್ಕೆ ಬಂದ ಸಚಿವ ಆನಂದ್‌ ಸಿಂಗ್‌! ಏನಿದರ ಗುಟ್ಟು? ರಾಜಕೀಯದಲ್ಲಿ ಕುತೂಹಲ

ಬೆಂಗಳೂರು: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆಗೆ ಸೋಮವಾರ ಚರ್ಚಿಸಿದ್ದು, ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿದೆ.

ಖಾಸಗಿ ಕಾರಿನಲ್ಲಿ ಸದಾಶಿವನಗರದ ಡಿಕೆಶಿ ನಿವಾಸದಲ್ಲಿ ಆನಂದ್ ಸಿಂಗ್ ಮಾತುಕತೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದು, ರಾಜಕೀಯ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಆನಂದ್ ಸಿಂಗ್ ಹೇಳಿಕೆ ನೀಡಿದ್ದಾರೆ.

ಇಲಾಖೆ ವಿಷಯ ಚರ್ಚಿಸುವುದಿದ್ದರೆ ಖಾಸಗಿ ಕಾರಿನಲ್ಲಿ ಬಂದಿದ್ದೇಕೆ ? ಎಂಬ ಪ್ರಶ್ನೆ ಜತೆಗೆ ಮತ್ತೆ ಕಾಂಗ್ರೆಸ್ ಗೆ ವಾಪಸ್ಸಾಗಲು ಬಯಸಿದ್ದಾರಾ ? ಎಂಬ ಸಂಶಯ ಮೂಡಿಸಿದೆ.

ಖಾತೆ ಬಗ್ಗೆ ಅಸಮಾಧಾನಿತ ಸಿಂಗ್ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ‌, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್ ಮನವೊಲಿಸಿ ಸಮಾಧಾನ ಮಾಡಿದ್ದರು.

ಆನಂದ್ ಸಿಂಗ್ ಅಪೇಕ್ಷೆಯಂತೆ ವಿಜಯನಗರ ಜಿಲ್ಲೆ ಘೋಷಣೆಯಾಗಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ. ಆದರೆ ಉಸ್ತುವಾರಿ ಬದಲಾಗಿದ್ದಕ್ಕೆ ಬೇಸರಿಗೊಂಡಿದ್ದಾರೆ ಎಂಬ ಕಾರಣಕ್ಕೆ ಡಿಕೆಶಿ ಭೇಟಿಗೆ ರಾಜಕೀಯ ತಳುಕು ಹಾಕಲಾಗುತ್ತಿದೆ.