ಜಿಲ್ಲೆ

ಆಕೆ ಕರೆನ್ಸಿ ಹಾಕಿಸಿಕೊಂಡಳು, ಅಂಗಡಿಯವ ಮೆಸೇಜ್​ ಕಳಿಸಿದ - ಹತ್ತಿರ ಕರೆದಾಕೆ ಮಾಡಿದ್ದೇನು?

suchetana

ಮಡಿಕೇರಿ: ಕರೆನ್ಸಿ ಹಾಕಿಸಿಕೊಳ್ಳಲು ಬರುವ ಯುವತಿಯರು, ಮಹಿಳೆಯರ ಮೊಬೈಲ್​ ನಂಬರ್​ ಅಂಗಡಿಯವರಿಗೆ ಸುಲಭದಲ್ಲಿ ಸಿಕ್ಕಿಬಿಡುತ್ತದೆ. ಇದನ್ನೇ ಬಳಸಿಕೊಂಡು ಇದಾಗಲೇ ಕೆಲವು ಅಂಗಡಿಯವರು ಪದೇ ಪದೇ ಯುವತಿಯರಿಗೆ ಕಿರಿಕಿರಿ ಕೊಡುವ ಘಟನೆಗಳು ನಡೆದಿವೆ.

ಅಂಥದ್ದೇ ಒಂದು ಘಟನೆ ಮಡಿಕೇರಿಯಲ್ಲಿಯೂ ನಡೆದಿದೆ. ಮೊಬೈಲ್‌ ಕರೆನ್ಸಿ ಹಾಕಿಸಿಕೊಳ್ಳಲು ಬರುವ ಯುವತಿಯರ ಮತ್ತು ವಿವಾಹಿತೆಯರ ಮೊಬೈಲ್​ ನಂಬರ್​ಗಳನ್ನು ಪಡೆದುಕೊಳ್ಳುವ ಕಾಮುಕನೊಬ್ಬ, ಅವರಿಗೆ ಪದೇ ಪದೇ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ. ಇತನ ಹೆಸರು ಮೊಹಮ್ಮದ್ ಮುದಾಸಿರ್.

ಈತನ ಆಟ ನಡೆದೇ ಇತ್ತು. ಹಲವಾರು ಮಹಿಳೆಯರು ಹಾಗೂ ಯುವತಿಯರು ಈತನ ಸಹವಾಸವೇ ಬೇಡ ಎಂದು ಬೇರೆ ಕಡೆಗಳಲ್ಲಿ ಕರೆನ್ಸಿ ಹಾಕಿಸಿಕೊಳ್ಳುತ್ತಿದ್ದರು. ಆದರೆ ಒಮ್ಮೆ ಕರೆನ್ಸಿ ಹಾಕಿಸಲು ಬಂದರೆ ಸಾಕಲ್ಲ, ಈತನಿಗೆ ಅವರ ಮೊಬೈಲ್​ ನಂಬರ್​ ಸಿಗಲು. ಇದನ್ನೇ ಇಟ್ಟುಕೊಂಡು ಆತ ದಿನ-ರಾತ್ರಿಯೆನ್ನದೇ ಮೆಸೇಜ್​ ಮಾಡುತ್ತಿದ್ದ.

ಖಾಸಗಿ ಬಸ್‌ ನಿಲ್ದಾಣದ ಬಳಿ ಮೊಬೈಲ್‌ ಅಂಗಡಿ ಹೊಂದಿರುವ ಮೊಹಮದ್ ಇದೇ ರೀತಿ ತನ್ನ ಕಳ್ಳಾಟ ಮುಂದುರೆಸಿದ್ದ. ಕಳೆದ ವಾರ ವಿವಾಹಿತೆಯೊಬ್ಬರು ಮೊಬೈಲ್​ ಕರೆನ್ಸಿ ಹಾಕಿಸಿಕೊಳ್ಳಲು ಬಂದಾಗಲೂ ಇದೇ ರೀತಿ ಮಾಡಿದ್ದಾನೆ. ರಾತ್ರಿ ಹೊತ್ತಿನಲ್ಲಿ ಅಶ್ಲೀಲ ಮೆಸೇಜ್‌ ಕಳಿಸತೊಡಗಿದ್ದ.

ಇದರಿಂದ ನೊಂದುಹೋಗಿದ್ದ ಮಹಿಳೆ ಮಡಿಕೇರಿ ನಗರ ರಕ್ಷಣಾ ವೇದಿಕೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಆತನನ್ನು ಸದೆಬಡಿಯಲು ಯೋಜನೆ ರೂಪಿಸಿದ ಕಾರ್ಯಕರ್ತರು ಈ ಕುರಿತು ಮಹಿಳೆಗೆ ಸೂಚಿಸಿದರು.

ಅದರಂತೆ ಮಹಿಳೆ, ಆ ಅಂಗಡಿಯವನ ಮೆಸೇಜ್​ಗೆ ರಿಪ್ಲೈ ಮಾಡಿ ಹಳೆ ಆರ್​ಟಿಒ ಕಚೇರಿಯ ಬಳಿ ಬಂದರೆ ತಾವು ಸಿಗುವುದಾಗಿ ಹೇಳಿದ್ದಾರೆ. ಮೆಸೇಜ್​ ಬಂದಿದ್ದನ್ನು ಕಂಡು ಹಿಗ್ಗಿ ಹೀರೇಕಾಯಿಯಾದ ಕಾಮುಕ ಮೊಹಮ್ಮದ್​ ಸ್ಥಳಕ್ಕೆ ಬಂದಿದ್ದಾನೆ.

ಮೊದಲೇ ಮಾಡಿಕೊಂಡ ಪ್ಲ್ಯಾನ್​ನಂತೆ ವೇದಿಕೆಯ ಕಾರ್ಯಕರ್ತರು ಆತನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತನ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಈತ ಇದೇ ರೀತಿ ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಮೆಸೆಂಜರ್​ನಲ್ಲಿಯೂ ಮಹಿಳೆಯರಿಗೆ ಅಸಭ್ಯ ಮೆಸೇಜ್‌ ಕಳಿಸುತ್ತಿದ್ದ ಎಂದು ತಿಳಿದುಬಂದಿದೆ.

ಇದೇ ಕಾರಣಕ್ಕೆ ಸಿಕ್ಕ ಸಿಕ್ಕ ಅಂಗಡಿಗಳಲ್ಲಿ ಕರೆನ್ಸಿ ಹಾಕಿಸುವುದನ್ನು ತಪ್ಪಿಸಬೇಕು ಎನ್ನುವುದು ಪೊಲೀಸರ ಸಲಹೆ. ಏಕೆಂದರೆ ಕರೆನ್ಸಿ ಹಾಕಿಕೊಳ್ಳುವ ಸಮಯದಲ್ಲಿ ಸುಲಭದಲ್ಲಿ ನಿಮ್ಮ ಮೊಬೈಲ್​ ಸಂಖ್ಯೆ ಅಂಗಡಿಯವರಿಗೆ ಸಿಕ್ಕಿಬಿಡುತ್ತದೆ.