ಜಿಲ್ಲೆ

ಲಾಕ್‌ಡೌನ್‌ನಿಂದ ತಗ್ಗುತ್ತಿದೆ ಕರೊನಾ- ಹಳ್ಳಿಯೆಡೆಗೆ ಸರ್ಕಾರದ ನಡೆ: ಗೃಹ ಸಚಿವ ಬೊಮ್ಮಾಯಿ

suchetana

ಬೆಂಗಳೂರು: ಲಾಕ್‌ಡೌನ್‌ನಿಂದಾಗಿ ಬೆಂಗಳೂರು ಮಹಾನಗರ ಸೇರಿದಂತೆ ಹಲವು ನಗರಗಳಲ್ಲಿ ಕರೊನಾ 2ನೇ ಅಲೆ ಪ್ರಭಾವ ತಗ್ಗಲಾರಂಭಿಸಿದ್ದು, ಹಳ್ಳಿಗಳತ್ತ ಸರ್ಕಾರ ಹೆಚ್ಚಿನ ಲಕ್ಷ್ಯವಹಿಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ಹೇಳಿದರು.

ಮಂಗಳವಾರ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಸೋಂಕು ಪ್ರಕರಣಗಳು ಹೆಚ್ಚು ಕಂಡು ಬಂದಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ಷ್ಮ ನಿಯಂತ್ರಿತ ವಲಯ ಸ್ಥಾಪಿಸಲು ಸೂಚಿಸಲಾಗಿದೆ.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಆರೋಗ್ಯಾಧಿಕಾರಿ ಒಳಗೊಂಡ ಸಮಿತಿಯು ಈ ವಲಯದ ಮೇಲ್ವಿಚಾರಣೆ ನಡೆಸಲಿದ್ದು, ಸೂಕ್ಷ್ಮ ನಿಯಂತ್ರಿತ ವಲಯದ ಕುಟುಂಬಗಳಿಗೆ ಮೆಡಿಸಿನ್, ದಿನಸಿ ಪದಾರ್ಥಗಳ ವ್ಯವಸ್ಥೆ ಮಾಡಬೇಕು. ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಟೆಸ್ಟ್ ಕಡ್ಡಾಯ, ಪ್ರಥಮ ಸಂಪರ್ಕಿತರಿಗೆ‌ ಜೀವಸತ್ವ ಮಾತ್ರೆಗಳನ್ನು ವಿತರಿಸಲು ಆದೇಶಿಸಲಾಗಿದೆ ಎಂದು ಬೊಮ್ಮಾಯಿ‌ ತಿಳಿಸಿದರು.

ಸಿಎಂ ವಿಡಿಯೋ ಸಂವಾದ ನಾಳೆ
ಸೋಂಕು ಪ್ರಕರಣಗಳು ಹೆಚ್ಚು ಕಂಡು ಬಂದಿರುವ, ‌ಆಯ್ದ ಗ್ರಾ.ಪಂ.ಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ಜತೆಗೆ ಸಿಎಂ ಬಿಎಸ್ ವೈ ಬುಧವಾರ ವಿಡಿಯೋ ಸಂವಾದ ನಡೆಸಲಿದ್ದು, ಸರ್ಕಾರದ ಸೂಚನೆಯಂತೆ ಕೈಗೊಂಡ ಕ್ರಮಗಳನ್ನು ಪರಾಮರ್ಶಿಸಿ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ.

ಸಿಎಂ ನಿವಾಸ ಕಾವೇರಿಯಲ್ಲಿ ಇಂದು ಸಂಜೆ ನಡೆಯಲಿರುವ ಸಚಿವರು, ಹಿರಿಯ ಅಧಿಕಾರಿಗಳ ಸಭೆಯಲ್ಲಿ ರಾಜ್ಯದ ಕರೊನಾ ಸ್ಥಿತಿಗತಿ, ಬ್ಲ್ಯಾಕ್ ಫಂಗಸ್ ಪರಿಸ್ಥಿತಿ ಹಾಗೂ ಚಿಕಿತ್ಸೆ, ಮಕ್ಕಳ ವಿಶೇಷ ವಾರ್ಡ್ ಸ್ಥಾಪನೆ ಹಾಗೂ ಐಸಿಯು ವ್ಯವಸ್ಥೆ ಮುಂತಾದ ವಿಷಯಗಳು ಚರ್ಚೆಯಾಗಲಿವೆ ಎಂದು ಬೊಮ್ಮಾಯಿ‌ ವಿವರಿಸಿದರು.

ರಮೇಶ್ ಜಾರಕಿಹೊಳಿ ಪ್ರಕರಣ ತನಿಖೆ ಹಂತದಲ್ಲಿ ಇರುವಾಗ ಯಾವುದೇ ಹೇಳಿಕೆ, ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬೊಮ್ಮಾಯಿ‌ ಉತ್ತರಿಸಲು ನಿರಾಕರಿಸಿದರು.