ಕೋಲಾರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಗೆ ತೆರಳಿದ್ದ ಕಾಂಗ್ರೆಸ್ ಕಾರ್ಯಕರ್ತ ನಾಪತ್ತೆಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಆ.15 ರಂದು ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಗೋವಿಂದಪ್ಪ (47) ಬೆಂಗಳೂರಿಗೆ ಪಾದಯಾತ್ರೆಯಾಗಿ ಹೊರಟವರು ಇದುವರೆಗೆ ಮನೆಗೆ ವಾಪಸಾಗಲಿಲ್ಲ. ಇವರನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಪಾದಯಾತ್ರೆಗೆ ಕರೆದುಕೊಂಡು ಹೋಗಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ.
ಪಕ್ಕದ ಊರಿನ ನಡುಪಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಸಂತೋಷ್ ಎನ್ನುವವರು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಆದರೆ ಇದುವರೆಗೂ ಗೋವಿಂದಪ್ಪ ಅವರು ವಾಪಸಾಗಲಿಲ್ಲ. ಇದರಿಂದ ಕುಟುಂಬಸ್ಥರು ಆತಂಕದಲ್ಲಿದ್ದಾರೆ.
ಗೋವಿಂದಪ್ಪನವರ ಬರುವಿಕೆಗೆ ತಾಯಿ, ಹೆಂಡತಿ ಮತ್ತು 3 ಜನ ಹೆಣ್ಣು ಮಕ್ಕಳು ಕಾಯುತ್ತಿದ್ದಾರೆ. ಸದ್ಯ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲು ಮಾಡಲಾಗಿದೆ (ದಿಗ್ವಿಜಯ ನ್ಯೂಸ್)