ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಆಗುತ್ತಾ? ಶಾಲಾ ಕಾಲೇಜುಗಳು ಮುಚ್ಚುತ್ತಾ? ನೈಟ್ ಕರ್ಫ್ಯೂ ಕಥೆ ಏನು? ಇವೆಲ್ಲವುಗಳಿಗೆ ಈಗ ಉತ್ತರ ಸಿಕ್ಕಿದೆ.
ಇಂದು ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.
ವಿವಿಧ ಕ್ಷೇತ್ರದ ತಜ್ಞರ ಅಭಿಪ್ರಾಯಗಳನ್ನು ಪಡೆದುಕೊಂಡು ಅಂತಿಮವಾಗಿ ಈ ತೀರ್ಮಾನ ತೆಗೆದುಕೊಳ್ಳಾಗಿದೆ. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಇವುಗಳ ಆಧಾರದ ಮೇಲೆ ಇವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ಏನೇನು ತೀರ್ಮಾನವಾಗಿದೆ? ಇಲ್ಲಿವೆ ಮುಖ್ಯಾಂಶಗಳು:
*10, 11 ಮತ್ತು 12 ತರಗತಿ ಹೊರತುಪಡಿಸಿ ಉಳಿದ ಎಲ್ಲಾ ತರಗತಿಗಳು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಇದೇ 6 ರಿಂದ ಈ ನಿಯಮ ಅನ್ವಯ, ಇದು ಬೆಂಗಳೂರಿಗೆ ಮಾತ್ರ ಅನ್ವಯ. ಇದು ಮುಂದಿನ ಎರಡು ವಾರಗಳವರೆಗೆ ಚಾಲ್ತಿಯಲ್ಲಿ ಇರುತ್ತದೆ. ಮೆಡಿಕಲ್, ಪ್ಯಾರಾಮೆಡಿಕಲ್, ನರ್ಸಿಂಗ್ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ.
ಶಾಲೆ-ಕಾಲೇಜು ಹೊರತುಪಡಿಸಿ ಈ ಕೆಳಕಂಡ ನಿಯಮಗಳು ಉಳಿದೆಲ್ಲವೂ ರಾಜ್ಯಕ್ಕೆ ಅನ್ವಯ ಆಗುತ್ತದೆ.
* ನೈಟ್ ಕರ್ಫ್ಯೂ ಹತ್ತು ದಿನ ಮುಂದುವರಿಕೆ. ಜ. 17ರವರೆಗೆ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಮುಂದುವರೆಯಲಿದೆ. ಎಲ್ಲಾ ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತದೆ.
* ಗೋವಾ, ಮಹಾರಾಷ್ಟ್ರದಿಂದ ಬರುವವರು ರೈಲು, ರಸ್ತೆ, ವಾನದಿಂದ ಬರುವವರ ಮೇಲೆ ನಿಗಾ ಇಟ್ಟು ಆರ್ ಟಿಪಿಸಿಆರ್ ಕಡ್ಡಾಯ ಮಾಡಲಾಗಿದೆ. ಜನವರಿ ಒಂದರಿಂದ ಗೋವಾದಿಂದ ಬಂದವರ ಮೇಲೆ ನಿಗಾ ಇಟ್ಟು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕ್ರಮದ ಬಗ್ಗೆ ಯಾರೂ ಆತಂಕ ಬೇಡ.