ಬೆಂಗಳೂರು: ಕರ್ನಾಟಕದಾದ್ಯಂತ ಎಲ್ಲೆಡೆ 66ನೇ ಕನ್ನಡ ರಾಜ್ಯೋತ್ಸವ ಸಮಾರಂಭಗಳು ನಡೆಯುತ್ತಿವೆ. ನಟ ಪುನೀತ್ ರಾಜ್‌ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ರಾಜ್ಯೋತ್ಸವವನ್ನು ಆಡಂಬರದಲ್ಲಿ ಮಾಡದೇ ಸರಳವಾಗಿ ಆಚರಿಸಲಾಗುತ್ತಿದೆ.
ಈ ಸಮಾರಂಭಕ್ಕೆ ಇದಾಗಲೇ ಹಲವಾರು ಗಣ್ಯರು, ಬೇರೆ ಬೇರೆ ರಾಜ್ಯಗಳ ಗಣ್ಯರು ಕೂಡ ಶುಭಾಶಯ ಕೋರಿದ್ದಾರೆ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ. ಕರ್ನಾಟಕವು ತನ್ನ ಜನರ ಹೊಸತನದ ಶೋಧದ ತುಡಿತದಿಂದಾಗಿ ವಿಶೇಷ ಛಾಪು ಮೂಡಿಸಿದೆ. ರಾಜ್ಯವು ಅತ್ಯುತ್ಕೃಷ್ಟ ಸಂಶೋಧನೆ ಮತ್ತು ಉದ್ಯಮಶೀಲತೆಯಿಂದಾಗಿ ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕವು ಯಶಸ್ಸಿನ ಹೊಸ ಎತ್ತರವನ್ನು ಏರಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ ಮಂಡ್ಯ ಜಿಲ್ಲೆಯ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು. ತಾಲ್ಲೂಕು ಆಡಳಿತದಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುತ್ತ ಮಕ್ಕಳ ಜತೆ ಮಕ್ಕಳಾಗಿ ನೃತ್ಯ ಮಾಡಿದರು ಶಾಸಕರು. ತುಮಕೂರಿನಲ್ಲಿ ವಿಶೇಷ ರೀತಿಯಲ್ಲಿ ಕನ್ನಡ ರಥೋತ್ಸವ ಮನಸೂರೆಗೊಂಡಿತು.
ಚಾಮರಾಜನಗರ, ವಿಜಯನಗರ ಸೇರಿದಂತೆ ಹಲವೆಡೆ ಕನ್ನಡ ರಾಜ್ಯೋತ್ಸವದಲ್ಲಿ ಪುನೀತ್ ರಾಜಕುಮಾರ್ ಭಾವಚಿತ್ರ ರಾರಾಜಿಸುತ್ತಿತ್ತು. ಪುನೀತ್ ಅವರ ಚಿತ್ರದ ಕೆಲವು ಹಾಡಿಗಳಿಗೆ ಮಕ್ಕಳು ನೃತ್ಯ ಮಾಡುವ ಮೂಲಕ ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬೀದರ್‌ನಲ್ಲಿ ಜಿಲ್ಲಾ ಪೊಲೀಸ್ ಮೀಸಲು ಪಡೆ, ಕೆಎಸ್ಆರ್ಪಿ, ಅಬಕಾರಿ, ಹೋಮ್ ಗಾರ್ಡ್ ಸೇರಿದಂತೆ ವಿವಿಧ ತುಕಡಿಯಿಂದ ಪಥಸಂಚಲನ ನಡೆಸಲಾಯಿತು.
ದಾವಣಗೆರೆಯಲ್ಲಿ 31 ಸಾವಿರಕ್ಕೂ ಹೆಚ್ಚು ಶರ್ಟ್ ಬಟನ್‌ಗಳಲ್ಲಿ ನಟ ವಿಷ್ಣುವರ್ಧನ್ ಅವರ ಭಾವಚಿತ್ರ ತಯಾರಿಸಲಾಗಿತ್ತು. ಕಲಾವಿದ ಪ್ರದೀಪ್ ಅವರು ಈ ಚಿತ್ರ ರಚನೆ ಮಾಡಿದರು. ನಟನಿಗೆ ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ಕೆಲವು ಗಣ್ಯರಿಗೆ ನೀಡಲಾಯಿತು.
ಶಾಸಕ ಪುಟ್ಟರಾಜು ಅವರ ನೃತ್ಯದ ವಿಡಿಯೋ ಇಲ್ಲಿದೆ ನೋಡಿ: