ಆರೋಪಿ ವಿಜಯ್ ಹಳ್ಳಿ, ಪಿಎಸ್ಐ ಸುವರ್ಣಾ  
ಜಿಲ್ಲೆ

ಕಾಂಗ್ರೆಸ್​ ಮುಖಂಡನ ಕೊಲೆ ಆರೋಪಿ ಮೇಲೆ ಫೈರಿಂಗ್​: ಲೇಡಿ ಪಿಎಸ್ಐ ಮೇಲೆ ಹಲ್ಲೆ ಮಾಡಿ ಎಸ್ಕೇಪ್​ ಆಗ್ತಿದ್ದ ವೇಳೆ ಘಟನೆ

ಕಲಬುರಗಿ: ಕಾಂಗ್ರೆಸ್ ಮುಖಂಡ ಗಿರೀಶ ಕಂಬಾನೂರ ಕೊಲೆಯ ಪ್ರಮುಖ ಆರೋಪಿ ವಿಜಯ್ ಹಳ್ಳಿ ಮೇಲೆ ಕಲಬುರಗಿಯ ಶಹಬಾದ್ ಪಟ್ಟಣದ ಹೊರವಲಯದಲ್ಲಿ ಪೊಲೀಸರಿಂದ ಫೈರಿಂಗ್​ ನಡೆದಿದೆ. ವಿಚಾರಣೆಗೆಂದು ಕರೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್​ ಆಗಲು ಪ್ರಯತ್ನಿಸುತ್ತಿದ್ದ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಆರೋಪಿಯ ಬಲಗಾಲಿಗೆ ಗುಂಡೇಟು ತಗುಲಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಲ್ಲಿ‌ ಪಿಎಸ್ಐ ಸುವರ್ಣಾ ಅವರಿಗೂ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ವಿವರ:

ಇದೇ 11ರಂದು ಗಿರೀಶ ಕಂಬಾನೂರ ಕೊಲೆ ನಡೆದಿತ್ತು. ತನಿಖೆಯ ವೇಳೆ ವಿಜಯನೇ ಈ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಈತನನ್ನು ನಿನ್ನೆ (ಶುಕ್ರವಾರ) ಪೊಲೀಸರು ಬಂಧಿಸಿದ್ದರು. ಕೊಲೆಗೆ ಬಳಸಿದ ಮಾರಕಾಸ್ತ್ರವೊಂದನ್ನು ಈತ ಎಲ್ಲಿಯೋ ಬಿಸಾಡಿದ್ದ. ಆ ಸ್ಥಳದ ಮಹಜರು ಮಾಡಲು ಇಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಕರೆದುಕೊಂಡು ಹೋಗಲಾಗಿತ್ತು.

ಈ ಸಮಯದಲ್ಲಿ ತನಿಖಾಧಿಕಾರಿ, ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರ ಮತ್ತು ಪಿಎಸ್ಐ ಸುವರ್ಣಾ ಅವರು ಆರೋಪಿ ಜತೆಯಲ್ಲಿ ಇದ್ದರು. ತಾನು ಬಿಸಾಡಿದ ಮಚ್ಚು ತೋರಿಸಿದ್ದ ವಿಜಯ, ಅದನ್ನು ತೆಗೆದುಕೊಂಡು ಅದರಿಂದಲೇ ಸುವರ್ಣಾ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಪ್ರಕಾಶ ಯಾತನೂರ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ವಿಜಯಗೆ ಶರಣಾಗುವಂತೆ ಹೇಳಿದ್ದಾರೆ. ಆದರೂ ತಪ್ಪಿಸಿಕೊಳ್ಳಲು ಯತ್ನ ಮುಂದುವರೆಸಿದಾಗ ಆರೋಪಿಯ ಬಲಗಾಲಿಗೆ ಒಂದು ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಎರಡು ವರ್ಷದ ಹಿಂದೆ ಗಿರೀಶ ಕಂಬಾನೂರ ಅಣ್ಣ ಸತೀಶ ಕೊಲೆ ಮಾಡಿರುವ ಆರೋಪ ಕೂಡ ಈತನ ಮೇಲಿದೆ. ಕೊಲೆ ನಂತರ ಜೈಲಿನಿಂದಲೇ ಕಂಬಾನೂರ ಕುಟುಂಬಕ್ಕೆ ಬೆದರಿಕೆ ಹಾಕುವುದು ಸೇರಿದಂತೆ ವಿಜಯ ವಿರುದ್ಧ ಒಟ್ಟು 6 ಪ್ರಕರಣಗಳು ದಾಖಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.