ಜಿಲ್ಲೆ

ರಾಜ್ಯದಲ್ಲೂ ಐಸಿಸ್‌ ಉಗ್ರರ ಲಿಂಕ್‌! ಮಾಜಿ ಶಾಸಕನ ಮೊಮ್ಮಗ ಸೇರಿ ನಾಲ್ವರು ಅರೆಸ್ಟ್‌- ಹಿನ್ನೆಲೆ ಭಯಾನಕ

suchetana

ಬೆಂಗಳೂರು: ಐಸಿಸ್‌, ಜಮ್ಮು-ಕಾಶ್ಮೀರದ ಉಗ್ರ ಸಂಘಟನೆ ಜತೆಗೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಂಗಳೂರಿನ ಉಳ್ಳಾಲದ ಪ್ರಸಿದ್ಧ ಸಾಹಿತಿ, ಶಾಸಕರಾಗಿದ್ದ ಬಿ.ಎಂ.ಇದಿನಬ್ಬ ಅವರ ಮೊಮ್ಮಗ ಅಮ್ಮರ್‌ ಅಬ್ದುಲ್‌ ರೆಹಮಾನ್‌ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿದೆ.

ಮಂಗಳೂರು, ಬೆಂಗಳೂರು ಹಾಗೂ ಜಮ್ಮು-ಕಾಶ್ಮೀರದಲ್ಲಿ ಬುಧವಾರ ಏಕಕಾಲಕ್ಕೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಅಮ್ಮರ್‌ ಅಬ್ದುಲ್‌ ರೆಹಮಾನ್‌ ಜತೆ ಬಂಧಿತರಾಗಿರುವ ಇನ್ನಿತರರು ಎಂದರೆ ಬೆಂಗಳೂರಿನ ಶಂಕರ್‌ ವೆಂಕಟೇಶ್‌ ಪೆರುಮಾಳ್‌ ಅಲಿಯಾಸ್‌ ಅಲಿ ಮೌವಿಯಾ, ಕಾಶ್ಮೀರದ ಶ್ರೀನಗರದ ಒಬೈದ್‌ ಹಮೀದ್‌ ಮತ್ತು ಬಂಡಿಪೋರದ ಮುಝಾಮಿಲ್‌ ಹಸನ್‌ ಬಟ್‌. ಇವರಿಂದ ಮೊಬೈಲ್‌, ಲ್ಯಾಪ್‌ಟಾಪ್‌ ಸೇರಿದಂತೆ ಅನೇಕ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಯುವಕರ ಮೂಲ ಕೆದಕಿದಾಗ ಇವರೆಲ್ಲರೂ ಸಿರಿಯಾ ಮೂಲದ ಇಸ್ಲಾಮಿಕ್‌ ಸ್ಟೇಟ್‌(ಐಸಿಸ್‌) ಉಗ್ರ ಸಂಘಟನೆಗೆ ಯುವಕರ ನೇಮಕಾತಿ ನಡೆಸುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಇಷ್ಟೇ ಅಲ್ಲದೇ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಕೆಲವು ಪ್ರಭಾವಿಗಳ ಕೊಲೆಗೆ ಸ್ಕೆಚ್‌ ಹಾಕಿರುವುದು ಕೂಡ ತನಿಖೆಯಿಂದ ತಿಳಿದುಬಂದಿದೆ. ಏಕೆಂದರೆ ಇದಾಗಲೇ ಈ ಕೇಸ್‌ನಲ್ಲಿ ಸಿಲುಕಿಕೊಂಡಿರುವ ಕೇರಳದ ಉಗ್ರ ಮಹಮ್ಮದ್‌ ಅಮೀನ್‌ ಜೊತೆಗೆ ಇವರು ಸಂಪರ್ಕ ಹೊಂದಿರುವುದು ತಿಳಿದಿದೆ. ಅಮೀನ್‌ ಜಾಡು ಹಿಡಿದು ಹೋದಾಗ ಕರ್ನಾಟಕದಲ್ಲಿಯೂ ಇದರ ಬೇರು ಬೀಡುಬಿಟ್ಟಿರುವುದು ತನಿಖಾಧಿಕಾರಿಗಳಿಗೆ ತಿಳಿದು ಅದರ ಆಳಕ್ಕೆ ಹೋದಾಗ ಉಳಿದವರು ಸಿಕ್ಕಿಬಿದ್ದಿದ್ದಾರೆ.

ಇವರೆಲ್ಲವೂ ಜಾಲತಾಣಗಳ ಮೂಲಕ ಧರ್ಮ ಬೋಧನೆ ಮಾಡಿ ಜಿಹಾದಿ ಹೋರಾಟದ ನೆಪದಲ್ಲಿ ಯುವಕರನ್ನು ಐಸಿಸ್‌ ಸಂಘಟನೆಗೆ ನೇಮಕಾತಿ ಮಾಡುತ್ತಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಇದಿನಬ್ಬ ಅವರ ಮಗ ಬಿ.ಎಂ.ಭಾಷಾ ಮಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದಾರೆ. ಇವರ ಪುತ್ರ ಅಮ್ಮರ್‌ ಅಬ್ದುಲ್‌ ರೆಹಮಾನ್‌ ಉದ್ಯಮ ನಡೆಸುತ್ತಿದ್ದಾರೆ. ಮಡಿಕೇರಿಯ ದೀಪ್ತಿ ಮಾರ್ಲ ಎಂಬವರ ಜತೆ ಮದುವೆ ಮಾಡಿಕೊಂಡು ನಂತರ ಹೆಸರನ್ನು ಮರಿಯಾ ಎಂದು ಬದಲಾಯಿಸಿದ್ದರು.