ಕಲಬುರಗಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇದುವರೆಗೂ ಅನೇಕ ಮಂದಿಯ ವಿರುದ್ಧ ಕೇಸ್ ದಾಖಲು ಮಾಡಿಕೊಂಡಿದ್ದಾರೆ.
ಅದರಂತೆ ಕಲಬುರಗಿಯಲ್ಲಿಯೂ ಈ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಈ ಬೆಟ್ಟಿಂಗ್‌ನಲ್ಲಿ ಇದೀಗ ಸ್ಥಳೀಯ ಶಾಸಕರ ಪತ್ನಿಯ ಹೆಸರು ಕೇಳಿಬಂದಿದೆ.
ಅಷ್ಟಕ್ಕೂ ಆಗಿರುವುದು ಏನೆಂದರೆ, ಮೂರು ದಿನಗಳ ಹಿಂದೆ ಇಲ್ಲಿಯ ಎಂ.ಬಿ. ನಗರದ ಪ್ರದೇಶದ ಮನೆಯೊಂದರಲ್ಲಿ ಬೆಟ್ಟಿಂಗ್ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸೊಲ್ಲಾಪುರದ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ಸಮಯದಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಅತುಲ್ ಸಿರಶೆಟ್ಟಿ, ಪ್ರದೀಪ್ ಮಲ್ಲಯ್ಯ ಕಾರಂಜೆ ಎಂಬುವವರನ್ನು ಅರೆಸ್ಟ್ ಮಾಡಿ ಅವರ ಬಳಿ ಇದ್ದ 38.44 ಲಕ್ಷ ರೂಪಾಯಿ ನಗದು, ನಾಲ್ಕು ಲ್ಯಾಪ್‌ಟಾಪ್‌ಗಳು, ಟಿ.ವಿ ಹಾಗೂ ಇನ್ನೋವಾ ಕ್ರಿಸ್ಟಾ ಕಾರು, ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದರು.
ಇದೀಗ ಆ ಕಾರಿನ ಮಾಹಿತಿ ಕಲೆಹಾಕಿದಾಗ ಕಾರು ಕಲಬುರಗಿಯ ಶಾಸಕ ಬಸವರಾಜ ಮತ್ತಿಮೂಡ ಅವರ ಪತ್ನಿ ಜಯಶ್ರೀ ಮತ್ತಿಮೂಡ ಅವರ ಹೆಸರಿನಲ್ಲಿ ಇರುವುದು ತಿಳಿದಿದೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಾತ್ರವಲ್ಲದೇ ಈ ಬೆಟ್ಟಿಂಗ್‌ನಲ್ಲಿ ಅನೇಕ ಮಂದಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ತನಿಖೆ ಮುಂದುರಿಸಲಾಗಿದೆ. ಸದ್ಯ ಆರೋಪಿಗಳನ್ನು ಸೊಲ್ಲಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕಾರಿನ ಕುರಿತಾಗಿಯೂ ಮಾಹಿತಿ ಕಲೆ ಹಾಕಲಾಗುತ್ತಿದೆ.