ಜಿಲ್ಲೆ

ನಸುಕಿನ ಕಾರ್ಯಾಚರಣೆ: ಗುಂಡು ಹಾರಿಸಿ ಕುಖ್ಯಾತ ರೌಡಿ ಅನೀಸ್‌ ಅರೆಸ್ಟ್‌

suchetana

ಬೆಂಗಳೂರು: ಕೊಲೆ ಸೇರಿದಂತೆ ಹಲವಾರು ದರೋಡೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ರೌಡಿ ಅನೀಸ್‌ ಅಹಮ್ಮದ್‌ ಇಂದು ನಸುಕಿನಲ್ಲಿ ಪೊಲೀಸರು ಗುಂಡು ಹಾರಿಸಿ ಬಂಧಿಸಿರುವ ಘಟನೆ ನಡೆದಿದೆ.

ಬೆಂಗಳೂರಿನ ಕೆ.ಜಿ ಹಳ್ಳಿ ಅರೆಬಿಕಾ ಕಾಲೇಜು ಬಳಿ ಈ ಘಟನೆ ಸಂಭವಿಸಿದೆ.

ಕೊಲೆ ಹಾಗೂ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅನೀಸ್‌ನನ್ನು ಬಂಧಿಸಲು ಪೊಲೀಸರು ತೆರಳಿದ್ದ ವೇಳೆ ಗುಂಡು ಹಾರಿಸಲಾಗಿದೆ. ಪೊಲೀಸರು ಬಂಧಿಸಲು ಬರುತ್ತಿದ್ದಂತೆಯೇ ಇದನ್ನು ಅರಿತ ಅನೀಸ್‌ ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ.

ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸುತ್ತಿದ್ದಂತೆಯೇ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಆತನ ಕಾಲಿಗೆ ಕೆ.ಜಿ ಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಅಜಯ್ ಸಾರಥಿ ಗುಂಡು ಹಾರಿಸಿದ್ದಾರೆ. ಆತ ಬಿದ್ದಾಗ ಬಂಧಿಸಲಾಗಿದೆ.

ಈತ ಮೂರು ವರ್ಷಗಳಿಂದ ಪೊಲೀಸರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದ. ಒಂದು ಕೊಲೆ ಮಾಡಿರುವ ಗಂಭೀರ ಆರೋಪ ಇವನ ಮೇಲಿದ್ದು, ಪೊಲೀಸರ ಕೈಗೆ ಮಾತ್ರ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲು ಪೊಲೀಸರು ತೆರಳಿದ್ದರು.

ತಮ್ಮ ಮೇಲೆ ಹಲ್ಲೆ ಮಾಡಿದ್ದ ಅನೀಸ್‌ ಓಡಿಹೋಗಲು ಪ್ರಯತ್ನಿಸಿದ್ದ. ಈ ಹಿನ್ನೆಲೆಯಲ್ಲಿ ಅವನ ಮೇಲೆ ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು. ನಿಯಮದ ಪ್ರಕಾರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.