ಜಿಲ್ಲೆ

ಎಫ್​ಐಆರ್​ ದಾಖಲಿಸಲು ಒಂದು ಲಕ್ಷ ರೂ. ಲಂಚ: ಲೇಡಿ ಸಬ್​ ಇನ್ಸ್​ಪೆಕ್ಟರ್, ಪೇದೆ ಅರೆಸ್ಟ್​​

suchetana

ಬೆಂಗಳೂರು: ಮೊಬೈಲ್​ ಕಳ್ಳತನ ಪ್ರಕರಣವೊಂದರಲ್ಲಿ ಲಂಚದ ಬೇಡಿಕೆ ಇಟ್ಟು, ಒಂದು ಲಕ್ಷ ರೂಪಾಯಿಯನ್ನು ಗುಳುಂ ಮಾಡಲು ನೋಡಿದ ಬೆಂಗಳೂರಿನ ಲೇಡಿ ಸಬ್​ ಇನ್ಸ್​ಪೆಕ್ಟರ್​ ಹಾಗೂ ಹೆಡ್ ಕಾನ್​ಸ್ಟೆಬಲ್​ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

ಮೊಬೈಲ್​ ಕಳ್ಳತನಕ್ಕೆ ಸಂಬಂಧಿಸಿದಂತೆ ಎಫ್​ಐಆರ್ ದಾಖಲು ಮಾಡಲು ಒಂದು ಲಕ್ಷ ರೂಪಾಯಿ ಲಂಚ ಕೇಳಿರುವ ಆರೋಪ ಇವರ ಮೇಲಿದೆ. ಈ ಸಂಬಂಧ ಸಬ್ ಇನ್ಸ್‌ಪೆಕ್ಟರ್ ಸೌಮ್ಯಾ ಮತ್ತು ಹೆಡ್ ಕಾನ್​ಸ್ಟೆಬಲ್ ಜೆ.ಪಿ. ರೆಡ್ಡಿ ಅವರನ್ನು ಬಂಧಿಸಲಾಗಿದೆ.

ಒಂದು ಲಕ್ಷ ರೂಪಾಯಿ ಲಂಚದ ಬೇಡಿಕೆ ಒಡ್ಡಿರುವ ಬಗ್ಗೆ ಎಸಿಬಿ ಪೊಲೀಸರಿಗೆ ದೂರುದಾರರು ಮಾಹಿತಿ ನೀಡಿದ್ದರು. ಅಧಿಕಾರಿಗಳ ಸಲಹೆಯಂತೆ ದೂರುದಾರರು ಲಂಚದ ಹಣವನ್ನು ಕೊಡಲು ತೆರಳಿದ್ದಾಗ ದಾಳಿಮಾಡಿದ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಎಸಿಬಿ ಕಾರ್ಯಾಚರಣೆ ವೇಳೆ ಕಾನ್ಸ್​ಟೆಬಲ್​ ಓಡಿಹೋಗಲು ಯತ್ನಿಸಿ ಜಾರಿ ಬಿದ್ದಿದ್ದು, ಅವರ ಕಾಲಿನ ಮೂಳೆ ಮುರಿದಿದೆ. ತನಿಖೆ ಮುಂದುವರೆದಿದೆ.