ಜಿಲ್ಲೆ

VIDEO: ಅಂಗಳದಲ್ಲಿ ಬಂದ ಕೋಳಿಗಾಗಿ ಮಾರಾಮಾರಿ... ಬಡಿಗೆ ಹಿಡಿದು ಕಿತ್ತಾಡಿದ ಉಡುಪಿ ಮಂದಿ!

ಉಡುಪಿ: ಇವರ ಮನೆಯ ಕೋಳಿ ಅವರ ಮನೆಗೆ ಹೋಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಎರಡೂ ಕುಟುಂಬದ ನಡುವೆ ನಡೆದ ಮಾರಾಮಾರಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಪ್ರಕರಣ ಉಡುಪಿಯಲ್ಲಿ ನಡೆದಿದೆ.

ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆ ಸಮೀಪದ ಉಳ್ಳೂರು ಇಂಥದ್ದೊಂದು ಗಲಾಟೆ ನಡೆದಿದೆ. ಇದರ ವಿಡಿಯೋ ಮಾಡಲಾಗಿದ್ದು, ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಕೋಳಿ ಜಗಳದ ಹಿಂದೆ ಎರಡೂ ಕುಟುಂಬದ ನಡುವೆ ಇರುವ ಹಳೆಯ ವೈಷಮ್ಯ ಇರಬಹುದು ಎನ್ನಲಾಗಿದೆ. ಈ ಕುಟುಂಬದ ನಡುವೆ ಜಮೀನಿನ ತಗಾದೆ ಇದ್ದು, ಇದರಿಂದಾಗಿ ಕೋಳಿಯ ನೆಪದಿಂದ ಜಗಳ ಮಾಡಿಕೊಂಡಿರುವುದಾಗಿ ಹೇಳಲಾಗಿದೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ: 

ರವಿರಾಜ ಶೆಟ್ಟಿ ಮನೆಯ ಕೋಳಿ ವಾರಿಜಾ ಅವರ ಅಂಗಳಕ್ಕೆ ಹೋಗಿದೆ. ಅದನ್ನು ವಾರಿಜ ಶೆಟ್ಟಿ ಓಡಿಸಿದ್ದಾರೆ. ನಂತರ ಈ ಜಗಳ ಶುರುವಾಗಿದೆ. ದೊಣ್ಣೆ ತೆಗೆದುಕೊಂಡು ವಾರಿಜಾ ಅವರ ಮೇಲೆ ರವಿರಾಜ್​ ಶೆಟ್ಟಿ ಹಲ್ಲೆ ಮಾಡಿರುವುದು ವಿಡಿಯೋದಲ್ಲಿ ಕಾಣಿಸುತ್ತಿದೆ.

ಕೋಳಿ ಪದೇಪದೇ ಬರುತ್ತದೆ ಎಂದು ವಾರಿಜಾ ಬೈದಿದ್ದಾರೆ. ಈ ವಿಚಾರ ರಂಪಾಟಕ್ಕೆ ಕಾರಣ. ಮಾತಿಗೆ ಮಾತು ಬೆಳೆದು ಜಗಳ ಮಿತಿ ಮೀರಿ ದೊಣ್ಣೆ ತೆಗೆದುಕೊಂಡು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ದಾನೆ ರವಿರಾಜ್ ಶೆಟ್ಟಿ. ಮಹಿಳೆಯರನ್ನು ಎಳೆದಾಡಿ ಅವಾಚ್ಯವಾಗಿ ಬೈದಿದ್ದಾನೆ. ಆತನಿಗೆ ಮಹಿಳೆಯೊಬ್ಬರು ಬೆಂಬಲ ನೀಡಿದ್ದು ವಾರಿಜಾ ಅವರ ಬೆಂಬಲಕ್ಕೆ ಬಂದ ಮಹಿಳೆಯ ಮೇಲೂ ಹಲ್ಲೆಯಾಗಿದೆ.

ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಈವರೆಗೆ ಯಾವುದೇ ಕಾನೂನು ಕ್ರಮ ಆಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.