ಹಾಸನ: ರಾಕಿಂಗ್ ಸ್ಟಾರ್ ಯಶ್ ಅವರ ತಂದೆ-ತಾಯಿ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದ ಘಟನೆ ಹಾಸನ ಜಿಲ್ಲೆಯ ತಿಮ್ಮೇನಹಳ್ಳಿಯಲ್ಲಿ ನಡೆದಿದೆ.
ದುದ್ದ ಹೋಬಳಿ ತಿಮ್ಮೇನಹಳ್ಳಿ ಗ್ರಾಮದ ಬಳಿ ಯಶ್ ಅವರು ಜಮೀನು ಖರೀದಿಸಿದ್ದು, ಇಲ್ಲಿ ಈ ಘಟನೆ ನಡೆದಿದೆ.
ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಯಶ್ ಕುಟುಂಬದ ಜತೆ ತಿಮ್ಮೇನಹಳ್ಳಿ ಗ್ರಾಮದ ಜನ ಗಲಾಟೆಗೆ ಮುಂದಾಗಿರುವ ಘಟನೆ ಇದಾಗಿದೆ. ಯಶ್ ಅವರ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪ ಜಮೀನಿನ ಬಳಿ ಕೆಲಸ ಮಾಡುವಾಗ ಗ್ರಾಮಸ್ಥರ ನಡುವೆ ವಾಗ್ವಾದ ಶುರುವಾಗಿದ್ದು ಇದು ತಾರಕಕ್ಕೇರಿದೆ.
ಓಡಾಡುವ ಕಾಲುದಾರಿ ಜಾಗಕ್ಕಾಗಿ ರಮೇಶ್ ಎಂಬುವರೊಂದಿಗೆ ವಾಗ್ವಾದ ಶುರುವಾಯಿತು. ಇದು ಕೈ ಕೈ ಮಿಲಾಯಿಸೋ ಹಂತಕ್ಕೆ ತಲುಪಿತು. ನಂತರ ಗ್ರಾಮಸ್ಥರೆಲ್ಲರೂ ಸೇರಿ ಗಲಾಟೆ ಶುರು ಮಾಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಯಶ್ ಬೆಂಬಲಿಗರಿಂದ ಭಾರಿ ಚಕಮಕಿ ನಡೆಯಿತು.
ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ದುದ್ದ ಪೊಲೀಸರು ಸಮಸ್ಯೆ ಬಗೆಹರಿಸಿದ್ದಾರೆ. ದುದ್ದ ಪೊಲೀಸ್ ಠಾಣೆಗೆ ಪುಷ್ಪಾ ಅವರು ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.