ಜಿಲ್ಲೆ

ಫೇಸ್‌ಬುಕ್‌ನಲ್ಲಿ ಪ್ರೇಮಪಾಶಕ್ಕೆ ಸಿಲುಕಿದ ಬೆಂಗಳೂರಿನ ವಿವಾಹಿತ: ಯುವತಿಯ ಗಲಾಟೆಯಿಂದ ಆತ್ಮಹತ್ಯೆ ಮಾಡಿಕೊಂಡ!

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಪ್ರೇಮಪಾಶಕ್ಕೆ ಸಿಲುಕಿದ ವಿವಾಹಿತನೊಬ್ಬ, ಕೊನೆಗೆ ದಾರುಣವಾಗಿ ಸಾವು ಕಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಚೇತನ್‌ ಎಂಬ 27 ವರ್ಷದ ಯುವಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾನೆ. ಚಿಕ್ಕಬಾಣಾವರದ ನಿವಾಸಿಯಾಗಿದ್ದ ಚೇತನ್‌ಗೆ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿತ್ತು. ಆದರೆ ಮದುವೆಯಾಗಿ ಮೂರು ವರ್ಷಗಳಲ್ಲಿಯೇ ಕುಟುಂಬದಲ್ಲಿ ಒಡಕು ಮೂಡಿತ್ತು. ಆದ್ದರಿಂದ ಚೇತನ್‌ ಪತ್ನಿಯನ್ನು ತೊರೆದು ಪ್ರತ್ಯೇಕವಾಗಿ ವಾಸವಾಗಿದ್ದ. ಈ ದಂಪತಿಗೆ ಮೂರು ವರ್ಷದ ಮಗು ಕೂಡ ಇದೆ. ಈ ದಂಪತಿಯ ಡಿವೋರ್ಸ್‌ ಕೇಸ್‌ ಕೋರ್ಟ್‌ನಲ್ಲಿ ಇನ್ನೂ ಇತ್ಯರ್ಥಕ್ಕೆ ಬಾಕಿ ಇದೆ.

ಈ ನಡುವೆಯೇ ಒಂಟಿಯಾಗಿದ್ದ ಚೇತನ್‌ ಫೇಸ್‌ಬುಕ್‌ನಲ್ಲಿ ಸದಾ ಆ್ಯಕ್ಟೀವ್‌ ಇದ್ದ. ಆಗ ಯುವತಿಯೊಬ್ಬಳ ಪರಿಚಯವಾಗಿದ್ದು, ಅದು ಪ್ರೇಮಕ್ಕೆ ತಿರುಗಿದೆ. ಆರಂಭದಲ್ಲಿ ಈತ ತನ್ನ ಕಥೆಯನ್ನು ಹೇಳಿರಲಿಲ್ಲ. ಆದ್ದರಿಂದ ಯುವತಿಗೆ ಇವನ ಮದುವೆಯಾಗಿರುವ ವಿಷಯ ತಿಳಿದಿರಲಿಲ್ಲ.

ಆದರೆ ಯಾವಾಗ ಈತ ಮದುವೆಯಾಗಿರುವ ವಿಷಯ ತಿಳಿಯಿತೋ ಯುವತಿ ಗಲಾಟೆ ಮಾಡಲು ಶುರು ಮಾಡಿದ್ದಾಳೆ. ತನಗೆ ಮೋಸ ಮಾಡಿರುವುದಾಗಿ ಹೇಳಿದ್ದಾರೆ. ಆತನ ಜತೆ ಹಲವಾರು ಕನಸು ಕಂಡಿದ್ದ ಯುವತಿಗೆ ವಿಷಯ ತಿಳಿದು ಅರಗಿಸಿಕೊಳ್ಳಲು ಆಗದೇ ರಂಪಾಟ ಮಾಡಲು ಶುರು ಮಾಡಿದ್ದಾಳೆ. ಮೊದಲೇ ನೊಂದಿದ್ದ ಚೇತನ್‌ಗೆ ಇದು ಸಹಿಸಿಕೊಳ್ಳಲು ಆಗಲಿಲ್ಲ. ಆದ್ದರಿಂದ ಬೇರೆ ದಾರಿ ಕಾಣದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.