ಬೆಂಗಳೂರು: ಸಂಪುಟ ಪುನರ್‌ರಚನೆ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸರ್ಕಸ್ ನಡೆಸುತ್ತಿರುವ ಹೊತ್ತಿನಲ್ಲಿಯೇ ಸಚಿವಾಕಾಂಕ್ಷಿಗಳು ಒಬ್ಬೊಬ್ಬರಾಗಿ ತಮ್ಮ ಅಂತರಂಗದ ಮಾತುಗಳನ್ನು ಬಹಿರಂಗಪಡಿಸುತ್ತಿದ್ದಾರೆ.
ಇದೀಗ ಅಬಕಾರಿ ಸಚಿವ ಎಚ್. ನಾಗೇಶ್ ಅವರು ಮಾತನಾಡಿದ್ದು, ಈ ಸರ್ಕಾರದ ರಚನೆಗೆ ನಾನೇ ಪ್ರಮುಖ ಕಾರಣ. ಸರ್ಕಾರ ಅಧಿಕಾರಕ್ಕೆ ಬದಲು ಟರ್ನಿಂಗ್ ಪಾಯಿಂಟ್ ಆಗಿದ್ದೇ ನಾನು. ಹೀಗಾಗಿ ನನ್ನನ್ನು ಯಾವುದೇ ಕಾರಣಕ್ಕೂ ಕೈ ಬಿಡಲ್ಲ ಎಂದು ಭರವಸೆಯ ನುಡಿಗಳನ್ನಾಗಿದ್ದಾರೆ.
ಇಲ್ಲಿಯ ವಿಕಾಸಸೌಧದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, 'ನನ್ನನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಮೈತ್ರಿ ಸರ್ಕಾರದಲ್ಲಿ ನಾನು ಸಚಿವನಾಗಿದ್ದೆ. ಮೊದಲು ರಾಜೀನಾಮೆ ನೀಡಿ ಬಂದವನೇ ನಾನು. ಆ ಬಳಿಕ, ಆರ್. ಶಂಕರ್ ಎಲ್ಲರೂ ರಾಜೀನಾಮೆ ನೀಡಿ ಬಂದಿದ್ದಾರೆ ಎಂದರು.
ಇದೇ ವೇಳೆ, ನನ್ನನ್ನು ಸರ್ಕಾರದಿಂದ ಕೈಬಿಡುವಷ್ಟು ಧೈರ್ಯ ಯಾರಿಗಿದೆ ಸ್ವಾಮಿ ಎಂದು ಪ್ರಶ್ನಿಸಿದರು. ಕಷ್ಟ ಕಾಲದಲ್ಲಿ ಯಡಿಯೂರಪ್ಪ ಅವರ ಕೈ ಹಿಡಿದಿದ್ದೇನೆ. ನನ್ನನ್ನು ಸಂಪುಟದಿಂದ ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ. ಹೈಕಮಾಂಡ್ ಮಾಡಿರುವ ತೀರ್ಮಾನದ ಬಗ್ಗೆ ಮಾಹಿತಿ ಇಲ್ಲ. ಆದರೆ ಯಡಿಯೂರಪ್ಪ ಮಾತ್ರ ನನ್ನನ್ನು ಸಂಪುಟದಿಂದ ಕೈ ಬಿಡುವುದಿಲ್ಲ ಎಂದು ಗೊತ್ತಿದೆ ಎಂದರು.
ಮುಖ್ಯಮಂತ್ರಿ ಜತೆ ಚರ್ಚೆ ಮಾಡುತ್ತೇನೆ. ಹೈಕಮಾಂಡ್ ಏನು ಹೇಳಿದೆ ಎಂಬುದನ್ನು ತಿಳಿದುಕೊಳ್ಳುತ್ತೇನೆ ಎಂದೂ ಅವರು ಇದೇ ವೇಳೆ ಹೇಳಿದರು.