ಜಿಲ್ಲೆ

ಕಂಗೆಡಿಸಿರುವ ಬ್ಲ್ಯಾಕ್‌ ಫಂಗಸ್‌- ಎರಡು ದಿನಗಳಲ್ಲಿ ವರದಿ, 2480 ವೈದ್ಯರ ನೇಮಕ

suchetana

ಬೆಂಗಳೂರು: ತಾಲೂಕು ಆಸ್ಪತ್ರೆಗಳ ವಿಶೇಷ ತಜ್ಞರು, ಸಾಮಾನ್ಯ ಕರ್ತವ್ಯದ ವೈದ್ಯರ ಕೊರತೆ ನೀಗಿಸುವ ಉದ್ದೇಶದಿಂದ ಇನ್ನೆರಡು ದಿನಗಳಲ್ಲಿ ಒಟ್ಟು 2,480 ವೈದ್ಯರ ನೇಮಕವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಪ್ರವಾಸಕ್ಕೆ ತೆರಳುವ ಮುನ್ನ ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಸಂಭಾವ್ಯ ಕರೊನಾ 2ನೇ ಅಲೆ ಎದುರಿಸುವುದಕ್ಕಾಗಿ ಕಳೆದ 4-5 ತಿಂಗಳಿಂದ ಅಗತ್ಯವಿರುವ ವೈದ್ಯರ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಈಗ ತಾರ್ಕಿಕ ಅಂತ್ಯಕ್ಕೆ ತಲುಪಿದೆ. ಒಂದರೆಡು ದಿನಗಳಲ್ಲಿ ನೇಮಕ ಅಧಿಸೂಚನೆ ಪ್ರಕಟವಾಗಲಿದೆ ಎಂದರು.

780 ವಿಶೇಷ ತಜ್ಞರು ಸೇರಿದಂತೆ 2,480 ವೈದ್ಯರ ನೇಮಕವಾಗಲಿದ್ದು, ಅವರೆಲ್ಲರನ್ನು ತಾಲೂಕು ಆಸ್ಪತ್ರೆಗಳಿಗೆ ನಿಯೋಜಿಸಲಾಗುವುದು. ತಾಲೂಕು ಆಸ್ಪತ್ರೆಗಳಲ್ಲಿನ ಅರಿವಳಿಕೆ, ಚಿಕಿತ್ಸಕ ತಜ್ಞರ ಕೊರತೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.

ಬ್ಲ್ಯಾಕ್ ಫಂಗಸ್ ವರದಿ ನಂತರ ಕ್ರಮ
ಕರೊನಾ ಸೋಂಕಿನ ಜತೆಗೆ ಬ್ಲ್ಯಾಕ್ ಫಂಗಸ್ ಬಾಧಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಕುರಿತು ತಜ್ಞರು ಹಾಗೂ ವೈದ್ಯಾಧಿಕಾರಿಗಳ ಜತೆಗೆ ಚರ್ಚಿಸಿದ್ದು, ಅಧ್ಯಯನ ನಡೆಸಿ 2 ದಿನಗಳಲ್ಲಿ ವರದಿ ಸಲ್ಲಿಸುವ ಜವಾಬ್ದಾರಿಯನ್ನು ತಾಂತ್ರಿಕ ತಜ್ಞರ ಸಲಹಾ ಸಮಿತಿಗೆ ಒಪ್ಪಿಸಲಾಗಿದೆ.

ಈ ಸಮಿತಿ ವರದಿ ಸಲ್ಲಿಸಿದ ಬಳಿಕ ಉನ್ನತಮಟ್ಟದ ಸಭೆ ನಡೆಸಿ ಚರ್ಚಿಸಲಾಗುವುದು. ಈ ರೋಗ ಕರೊನೋತ್ತರ ಸ್ವರೂಪವೆ ? ಅಥವಾ ಮತ್ತೆ ಬೇರೆ ಕಾರಣಗಳಿವೆಯೆ ? ತಿಳಿದು ಸರ್ಕಾರದ ನಿಲುವಿನ ಬಗ್ಗೆಯೂ ಸ್ಪಷ್ಟಪಡಿಸಿಕೊಳ್ಳಲಿದ್ದು, ಉಚಿತ ಚಿಕಿತ್ಸೆ ನೀಡುವ ಕುರಿತು ಸೂಕ್ತ ತೀರ್ಮಾನಕ್ಜೆ ಬರಲಾಗುವುದು ಎಂದು ಡಾ.ಕೆ.ಸುಧಾಕರ್ ಹೇಳಿದರು.

ಕರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ಘೋಷಿಸಿದ್ದು ದೇಶದಲ್ಲಿಯೇ ಮೊದಲ ರಾಜ್ಯ ನಮ್ಮದು. ಇದಕ್ಕಾಗಿ ಕಳೆದ ವರ್ಷ 350 ಕೋಟಿ ರೂ ಖರ್ಚು ಮಾಡಿದ್ದೇವೆ. ಬೇರೆ ದೇಶಗಳಲ್ಲಿ ಕರೊನಾ ಸೋಂಕಿತರ ಜತೆ ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯಿದೆ. ಆಸ್ಟ್ರೇಲಿಯಾದಲ್ಲಿ ಆಸ್ಟ್ರೇಲಿಯಾ ಪ್ರಜೆಯೇ ದೇಶಕ್ಕೆ ಮರಳಿದರೆ 14 ದಿನಗಳ ಹೋಮ್ ಕ್ವಾರಂಟೈನ್ ಗೆ 1.60 ಲಕ್ಷ ರೂ ಶುಲ್ಕ ವಿಧಿಸುತ್ತಾರೆ.

ನಮ್ಮಲ್ಲಿ ಪರೀಕ್ಷೆ, ಕರೊನಾ ಆರೈಕೆ ಕೇಂದ್ರ, ಚಿಕಿತ್ಸೆ ಎಲ್ಲವೂ ಉಚಿತ. ಬ್ಲ್ಯಾಕ್ ಫಂಗಸ್ ವಿಚಾರದಲ್ಲೂ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸುಧಾಕರ್ ಭರವಸೆ ನೀಡಿದರು.