ರಾಮನಗರ: ನೀವು ಜೈಲಿಗೆ ಹಾಕಿ, ಎಲ್ಲೇ ಹಾಕಿ, ಈ ಹೋರಾಟ ಮುಗಿಯುವವರೆಗೂ ನಾನು ಮನೆಯಲ್ಲಿ ಮಲಗಲ್ಲ. ನಿಮ್ಮ ಹೊಟ್ಟೆ ತಣ್ಣಗಾಗೋದಾದ್ರೆ ನನ್ನನ್ನು ಜೈಲಿಗೆ ಕಳಿಸಿದ್ರೂ ಅಭ್ಯಂತರ ಇಲ್ಲ. ಎಲ್ಲರ ಮೇಲೂ ಕೇಸ್ ಹಾಕಿದ್ರೂ ಹೆದರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಮೇಕೇದಾಟು ವಿಷಯವಾಗಿ ಪಾದಯಾತ್ರೆ ಕೈಗೊಂಡಿರುವ ಡಿ.ಕೆ.ಶಿವಕುಮಾರ್ ಇಂದು ಪಾದಯಾತ್ರೆಯನ್ನು ಮುಂದುವರೆಸಿದ್ದು, ಈ ಸಂದರ್ಭದಲ್ಲಿ ಅವರು ಮಾತನಾಡಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲ ದಿನದ ಪಾದಯಾತ್ರೆಯನ್ನು ದೊಡ್ಡ ಆಲಹಳ್ಳಿ ಗ್ರಾಮದಲ್ಲಿ ಪೂರ್ಣಗೊಳಿಸಿದ ಬಳಿಕ ಎರಡನೆಯ ದಿನಕ್ಕೆ ಅವರು ಸಜ್ಜಾಗಿದ್ದಾರೆ.
16 ಕಿ.ಮಿ ಸಂಚರಿಸಿ ದೊಡ್ಡ ಆಲಹಳ್ಳಿ ಗ್ರಾಮಕ್ಕೆ ಬಂದು ತಲುಪಿದೆ. ಹುಟ್ಟೂರಿನಲ್ಲಿ ಸ್ವಂತ ಮನೆ ಇದ್ದರೂ ಕೂಡ ಡಿಕೆಶಿ ಮನೆಯಲ್ಲಿ ಮಲಗದೇ ಶಾಲೆಯಲ್ಲೇ ಮಲಗಿದ್ದರು. ಇಂದು (ಸೋಮವಾರ) ಬೆಳಗ್ಗೆ 8.30ರ ಸುಮಾರಿಗೆ 30ಕ್ಕೆ 2ನೇ ದಿನದ ಪಾದಯಾತ್ರೆ ಆರಂಭಗೊಳ್ಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಸರ್ಕಾರ ನಮ್ಮ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಆದರೆ ಒಂದು ನೆನಪಿಟ್ಟುಕೊಳ್ಳಿ. ಈ ಹೋರಾಟ ಮುಗಿಯುವವರೆಗೂ ಮನೆಯಲ್ಲಿ ಮಲಗುವುದಿಲ್ಲ. ಸರ್ಕಾರ ಎಷ್ಟೇ ಒತ್ತಡ ತಂದರೂ ನಾವು ಅದಕ್ಕೆ ಹೆದರುವುದಿಲ್ಲ ಎಂದರು. ನಾವು ಈ ಕ್ಷೇತ್ರಕ್ಕೆ ರಸ್ತೆಯಿಂದ ಹಿಡಿದು ಎಲ್ಲ ಕೆಲಸ ಮಾಡಿದ್ದೇವೆ. ಡಿ.ಕೆ ಶಿವಕುಮಾರ್ ದೊಡ್ಡ ಅಲಹಳ್ಳಿಯವನು, ಕನಕಪುರದವನು ಅಂತಾ ಹೇಳ್ತಾರೆ. ಅವರ ಸೇವೆಗೆ ನಾನು ಸಿದ್ಧ ಎಂದರು.
ಇದೇ ಸಂದರ್ಭದಲ್ಲಿ ಗಡ್ಡಕ್ಕೆ ಮುಕ್ತಿ ನೀವೇ ಕೊಡಬೇಕು ಎಂದ ಡಿ.ಕೆ.ಶಿವಕುಮಾರ್ ಅವರು, ಕ್ಷೌರಿಕನ ಬಳಿ ಕ್ಷೌರ ಮಾಡಿಸಿಕೊಂಡರು. ನನ್ನನ್ನು ತಿಹಾರ್ ಜೈಲಿಗೆ ಹಾಕಿದ ಹಿನ್ನೆಲೆ ಗಡ್ಡ ಬಿಟ್ಟಿದ್ದೇನೆ. ಈ ಗಡ್ಡಕ್ಕೆ ಮುಕ್ತಿ ನೀವೇ ಕೊಡಬೇಕು ಎಂದು ಹೇಳಿದರು.
ಡಿಕೆ ಶಿವಕುಮಾರ್ ಕ್ಷೌರ ಮಾಡಿಸಿಕೊಂಡ ವಿಡಿಯೋ ಇಲ್ಲಿದೆ ನೋಡಿ: