ಜಿಲ್ಲೆ

ಡಿಜೆಹಳ್ಳಿ ಗಲಭೆ: ಪಾಷಾಗೆ ಐಸಿಸ್‌ ನಂಟು? ಕಾರ್ಪೋರೇಟರ್‌ಗಳ ಮೇಲೂ ಪೊಲೀಸರ ಕಣ್ಣು- ನೋಟಿಸ್‌ ಜಾರಿ

suchetana

ಬೆಂಗಳೂರು: ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲಭೈರಸಂದ್ರದಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿ ಅಪಾರ

ಆಸ್ತಿಪಾಸ್ತಿ ನಷ್ಟ ಮಾಡಿರುವ ಪ್ರಕರಣ ಕ್ಷಣ ಕ್ಷಣಕ್ಕೂ ಕುತೂಹಲ ಪಡೆಯುತ್ತಿದೆ. ಗಲಭೆಯ ಪ್ರಮುಖ ಆರೋಪಿ ಸಮಯುದ್ದೀನ್‌ ಪಾಷಾಗೆ ಐಸಿಸ್‌ ನಂಟು ಇರುವ ಬಗ್ಗೆ ಪೊಲೀಸರಿಗೆ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಮಯುದ್ದೀನ್‌ ಪಾಷಾ ಈ ಹಿಂದೆ ಆರ್‌ಎಸ್‌ಎಸ್‌ ಕಾರ್ಯಕರ್ತ ಸೇರಿದಂತೆ ಕೆಲವು ಕೊಲೆ ಪ್ರಕರಣಗಳಲ್ಲಿಯೂ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದಾನೆ. ಅಷ್ಟೇ ಅಲ್ಲದೇ ಈತನ ಮೊಬೈಲ್‌ ಇತ್ಯಾದಿ ಪರಿಶೀಲನೆ ಮಾಡಿದಾಗ ಐಸಿಸ್‌ ನಂಟು ಹೊಂದಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಅದೇ ಇನ್ನೊಂದೆಡೆ, ಈ ಗಲಭೆಯಲ್ಲಿ ಶಾಮೀಲಾಗಿರುವ ಹಾಗೂ ಕುಮ್ಮಕ್ಕು ನೀಡಿರುವ ಆರೋಪ ಹೊತ್ತ ಮಾಜಿ ಮೇಯರ್ ಸಂಪತ್‍ರಾಜ್ ಮತ್ತು ಪುಲಕೇಶಿನಗರ ಕಾರ್ಪೋರೇಟರ್ ಅಬ್ದುಲ್ ರಕೀಬ್ ಝಾಕೀರ್ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಆದೇಶಿಸಲಾಗಿದೆ.

ಶಾಸಕ ಅಖಂಡ ಶ್ರೀನಿವಾಸ್‍ಮೂರ್ತಿ ಮನೆ ಮೇಲಿನ ದಾಳಿ ಹಾಗೂ ಗಲಭೆಗೆ ಸಂಬಂಧಿಸಿದಂತೆ ರಾಜಕೀಯ ದ್ವೇಷದ ಕಾರಣವಿದೆ ಎಂಬ ಕಾರಣಕ್ಕಾಗಿ ಇಬ್ಬರು ಕಾಂಗ್ರೆಸ್‌ನ ಕಾರ್ಪೋರೇಟರ್‌ಗಳನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಆರೋಪಿಗಳಲ್ಲಿ ಒಬ್ಬನ ಬಳಿ ಇದ್ದ ಮೊಬೈಲ್‍ನ್ನು ಸಂಪತ್‍ರಾಜ್ ಬಳಸುತ್ತಿದ್ದರು ಮತ್ತು ಆ ಮೊಬೈಲ್‍ನಲ್ಲಿ ಗಲಭೆಗೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಗಳಿರಬಹುದು ಎಂಬ ಶಂಕೆ ಪೊಲೀಸರಿಗೆ ವ್ಯಕ್ತವಾಗಿದೆ. ಮೊಬೈಲ್‍ನಲ್ಲಿರುವ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದು ಅದರಲ್ಲಿನ ಸಾಕ್ಷ್ಯಗಳನ್ನು ಆಧರಿಸಿ ಕಾರ್ಪೋರೇಟರ್‌ ವಿಚಾರಣೆ ನಡೆಸಲಿದ್ದಾರೆ.

ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದ್ದು, ಇದಾಗಲೇ 380 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಲಭೆ ಪೀಡಿತ ಪ್ರದೇಶದಲ್ಲಿ ಆಗಸ್ಟ್‌ 21 ರವರೆಗೂ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ.