ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ಟೆಂಪಲ್ ಸ್ಟ್ರೀಟ್ ನಿವಾಸಿಯಾಗಿದ್ದ ದೀಪಂ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜುಗ್ಗುರಾಜ್ ಜೈನ್ ಅವರ ಬರ್ಬರ ಕೊಲೆ ರಹಸ್ಯವನ್ನು ಭೇದಿಸುತ್ತಿರುವ ಪೊಲೀಸರಿಗೆ ಕೊನೆಗೂ ಕೊಲೆಯ ರಹಸ್ಯ ಬಯಲಾಗಿದೆ.
ಕಳೆದ ಮೇ 24ರಂದು ಕಣ್ಣಿಗೆ ಖಾರದಪುಡಿ ಎರಚಿ, ಕೈಕಾಲು ಕಟ್ಟಿ ಬರ್ಬರವಾಗಿ ಹತ್ಯೆ ಮಾಡಿ ಕೋಟ್ಯಂತರ ರೂಪಾಯಿ ನಗ-ನಾಣ್ಯ ದೋಚಿದ್ದ ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ರಾಜಸ್ಥಾನ ಮೂಲದ ಬಿಜೋರಾಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಅವನು ತಾನು ಇಂಥದ್ದೊಂದು ಕೃತ್ಯಕ್ಕೆ ಕೈಹಾಕಿರುವುದಕ್ಕೆ ಕಾರಣ ಏನೆಂದು ಬಾಯಿಬಿಟ್ಟಿದ್ದಾನೆ.
ಕೊಲೆ ಮಾಡಿ ಗುಜರಾತ್ನಲ್ಲಿ ಅಡಗಿ ಕುಳಿತಿದ್ದ ಈತನನ್ನು ಬೆಂಗಳೂರಿನ ಪೊಲೀಸರು ಗುಜರಾತ್ ಪೊಲೀಸರ ಸಹಕಾರದೊಂದಿಗೆ ಸೆರೆಹಿಡಿದು 23 ಲಕ್ಷ ಚಿನ್ನಾಭರಣ ಜಪ್ತಿ ಮಾಡಿದ್ದರು. ಬಳಿಕ ಬಿಜೋರಾಮ್ನ್ನು ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಇಲ್ಲಿ ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ತನ್ನ ಪತ್ನಿಯ ಹೆಸರನ್ನು ಹೇಳಿದ್ದಾನೆ. ತನ್ನ ಪತ್ನಿಯ ಕಾಟದಿಂದಾಗಿ ಈ ಕೃತ್ಯ ಮಾಡಿರುವುದಾಗಿ ಹೇಳಿದ್ದಾನೆ.
ಬೀಜೊರಾಮ್ ಜುಗ್ಗುರಾಜ್ ಜೈನ್ ಬಳಿ ಕೆಲಸಕ್ಕೆ ಸೇರಿಕೊಂಡಿದ್ದ. ತಿಂಗಳಿಗೆ 15 ಸಾವಿರ ರೂಪಾಯಿ ಸಂಬ:ಳ ಸಿಗುತ್ತಿತ್ತು. ಆದರೆ ವೇತನ ಸಾಲದು ಎಂದು ಪ್ರತಿದಿನ ಈತನ ಪತ್ನಿ ಗಲಾಟೆ ಮಾಡುತ್ತಿದ್ದಳಂತೆ. ಹೆಚ್ಚಿನ ಹಣ ತೆಗೆದುಕೊಂಡು ಬರಲು ದಿನವೂ ಹಿಂಸಿಸುತ್ತಿದ್ದರಿಂದ ಬಹುಬೇಗನೇ ಹಣವನ್ನು ಸಂಪಾದಿಸಲು ಬೇರೆ ಮಾರ್ಗ ತೋರದೇ ಮಾಲೀಕನನ್ನೇ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.
ತನ್ನ ಪರಿಚಯದವರಾದ ಮಹೇಂದ್ರ, ಪೂರಾನ್ ಹಾಗೂ ಓಂ ಪ್ರಕಾಶ್ ಹಾಗೂ ಓಂರಾಮ್ ದೇವಸಿ ಎಂಬುವವರ ಸಹಾಯ ಪಡೆದಿರುವುದಾಗಿ ಈತ ಹೇಳಿದ್ದಾನೆ. ಓಂರಾಮ್ ದೇವಸಿ ಪರಾರಿಯಾಗಿದ್ದು, ಉಳಿದವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 4,93 ಕೋಟಿ ಮೌಲ್ಯದ 8 ಕೆಜಿ 752 ಗ್ರಾಂ ಚಿನ್ನ, 3 ಕೆಜಿ 870 ಗ್ರಾಂ ಬೆಳ್ಳಿ, 53 ಲಕ್ಷ ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೇ 24ರಂದು ಜುಂಗರಾಜ್ ಹತ್ಯೆ ಮಾಡಿ ಎರಡು ಬ್ಯಾಗಿನಲ್ಲಿ ದೋಚಿದ್ದ ನಗ ನಾಣ್ಯಗಳನ್ನು ಹೊತ್ತು ಹುಬ್ಬಳ್ಳಿ ಮಾರ್ಗವಾಗಿ ಗೋವಾಕ್ಕೆ ತೆರಳಿದ್ದರು. ಅಂತೂ ಈ ಆರೋಪಿಗಳು ಸಿಕ್ಕಿಬಿದ್ದಿದ್ದು, ಒಬ್ಬನಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಪೊಲಿಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.