ಜಿಲ್ಲೆ

‘ಸುರ್ಜೇವಾಲಾ ದೆಹಲಿಯ ರಿಜೆಕ್ಟ್‌ ಪೀಸ್‌: ಮೊದ್ಲು ನಿಮ್‌ ಯುವ ಅಧ್ಯಕ್ಷ ಯಾರು ಅನ್ನೋದನ್ನ ತಿಳ್ಕೊಳಿ’

ಬೆಂಗಳೂರು: ನಮ್ಮ ಟೀಕೆ ಟಿಪ್ಪಣಿ ಮಾಡುವ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ನಡುವೆ ನಡೆಯುತ್ತಿರುವ ಕಿತ್ತಾಟವನ್ನು ಮೊದಮೊದಲು ಸರಿಪಡಿಸಿಕೊಳ್ಳಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಕಿಡಿ ಕಾರಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು,, ಮೊದಲು ಇವರಿಬ್ಬರು ತಮ್ಮ ನಡುವಿನ ಸಮಸ್ಯೆ ಸರಿ ಮಾಡಿಕೊಳ್ಳಲಿ. ಆಮೇಲೆ ಉಪದೇಶ ನೀಡಲಿ ಎಂದರು.
ನಿಮ್ಮ ಯುವ ಕಾಂಗ್ರೆಸ್ ಅಧ್ಯಕ್ಷ ಯಾರು? ರಕ್ಷಾ ರಾಮಯ್ಯನಾ? ನಲ್‌ಪಾಡಾ? ಅದನ್ನ ಸರಿ ಮಾಡಿಕೊಳ್ಳಿ ಎಂದು ಟಾಂಗ್‌ ನೀಡಿದರು. ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಇವರಿಬ್ಬರ ನಡುವೆ ನಡೆದ ಭಾರಿ ಗಲಾಟೆ ಹಿನ್ನೆಲೆಯಲ್ಲಿ ಅವರು ಈ ಮಾತನ್ನು ಹೇಳಿದರು.

ಸಿದ್ದರಾಮಯ್ಯ, ಡಿಕೆಶಿ, ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಸುಖಾಸುಮ್ಮಾನೆ ಆರೋಪ ಮಾಡೋದು ಸರಿಯಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ದೆಹಲಿ ರಿಜೆಕ್ಟ್ ಪೀಸ್. ಅವರು ಬಂದು ಇಲ್ಲಿ ಬಿಜೆಪಿ ಬಗ್ಗೆ ತಿಳಿದುಕೊಳ್ಳದೇ, ಬಿಜೆಪಿ ನಾಯಕರ ಬಗ್ಗೆ ತಿಳಿದುಕೊಳ್ಳದೇ ಮಾತನಾಡೋದು ಸರಿಯಲ್ಲ. ಮೊದಲು ಅಸಂಬದ್ಧ ಹೇಳಿಕೆ ಕೊಡೋದನ್ನ ನಿಲ್ಲಿಸಬೇಕು ಎಂದರು (ಮೋದಿ ಸರ್ಕಾರ ಭ್ರಷ್ಟಾಚಾರ, ಅಧಿಕಾರ ದುರ್ಬಳಕೆಯಲ್ಲಿ ತೊಡಗಿದೆ‌ ಎಂದು ಸುರ್ಜೇವಾಲ ಆರೋಪಿಸಿದ್ದಾರೆ).

ಯಡಿಯೂರಪ್ಪ ಯಾಕೆ ರಾಜೀನಾಮೆ ನೀಡಿದರು ಅನ್ನೋದನ್ನ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ. ಯಾವುದೇ ಭ್ರಷ್ಟಾಚಾರ ಕಾರಣದಿಂದ ಅವರು ರಾಜೀನಾಮೆ ನೀಡಿದ್ದಲ್ಲ. ವಯಸ್ಸಿನ ಕಾರಣಕ್ಕೆ ಅವರು ಹೈಕಮಾಂಡ್ ಜೊತೆ ಚರ್ಚಿಸಿಯೇ ರಾಜೀನಾಮೆ ನೀಡಿದ್ದಾರೆ.
ರಾಜಕೀಯ ಕಾರಣಕ್ಕಾಗಿ ಕೇರಳದಲ್ಲಿ ಶ್ರೀಧರನ್ ಅವರನ್ನ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಯಡಿಯೂರಪ್ಪನವರು 75 ವರ್ಷ ಪೂರೈಸಿದ್ರೂ ಅವರಿಗೆ ಅವಕಾಶ ಕೊಟ್ಟಿದ್ದರು. ಆ ನಂತರ ಹೈಕಮಾಂಡ್ ಜೊತೆ ಚರ್ಚಿಸಿ ಬಿಎಸ್‌ವೈ ರಾಜೀನಾಮೆ ನೀಡಿದ್ದಾರೆ. ಇದಕ್ಕೆ ಬೇರೆ ಯಾವುದೇ ಕಾರಣ ಇಲ್ಲ ಎಂದು ಅಶ್ವಥ್ ನಾರಾಯಣ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.

ವಯಸ್ಸಿನ ಕಾರಣಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದರು ಎನ್ನುವ ನೀವು ಸಿಎಂ ಆಗಿದ್ದಾಗ, ಶ್ಯಾಮನೂರು ಶಿವಶಂಕರಪ್ಪ, ಶ್ರೀನಿವಾಸ್ ಪ್ರಸಾದ್ ಅವರನ್ನು ಯಾಕೆ ತೆಗೆದಿದ್ರಿ? ಎಂದು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.