ಜಿಲ್ಲೆ

ಡ್ರೋನ್‌ ಮೂಲಕ ಕರೊನಾ ಲಸಿಕೆ- ಯಶಸ್ವಿಯಾಯ್ತು ಪ್ರಯೋಗ: ಔಷಧಿ, ಆಹಾರ, ಅಂಗಾಂಗ ಸಾಗಣೆಗೂ ಇದರ ಬಳಕೆ

ಬೆಂಗಳೂರು: ಇದೇ ಮೊದಲ ಬಾರಿಗೆ ಕರೊನಾ ಲಸಿಕೆ ಪೂರೈಸಲು ಡ್ರೋನ್ ಬಳಕೆ ಮಾಡಲಾಗಿದ್ದು, ಪ್ರಥಮ ಯತ್ನ ಯಶಸ್ವಿಯಾಗಿ ಪೂರೈಸಲಾಗಿದೆ. ಆಕ್ಟಾ ಕಾಪ್ಟರ್ 20 ನಿಮಿಷದಲ್ಲಿ 14 ಕಿಲೋಮೀಟರ್ ದೂರ ಕ್ರಮಿಸಿದ್ದು, ಇದೊಂದು ದಾಖಲೆ ಎನ್ನಲಾಗಿದೆ. ರಸ್ತೆ ಮಾರ್ಗದಲ್ಲಿ ಆಗಿದ್ದರೆ 30 ರಿಂದ 40 ನಿಮಿಷ ಬೇಕಾಗುತ್ತಿತ್ತು. ಈ ಅವಧಿಯನ್ನು 10 ನಿಮಿಷಕ್ಕೆ ಇಳಿಸಲಾಗಿದೆ.

ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿಸ್ ಅಭಿವೃದ್ಧಿಪಡಿಸಿದ ಅಕ್ಟಾಕಾಪ್ಟರ್ ಮೂಲಕ ಯಶಸ್ವಿಯಾಗಿ ಲಸಿಕೆ ಪೂರೈಕೆ ಮಾಡಲಾಗಿದೆ. ಬೆಂಗಳೂರಿನ ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲಸಿಕೆಯನ್ನು ರವಾನೆ ಮಾಡಲಾಗಿದೆ.

ಗಂಟೆಗೆ 36 ಕಿ. ಮೀ. ವೇಗದಲ್ಲಿ ಹಾರಿರುವ ಡ್ರೋನ್‌, 15 ಕೆಜಿ ತೂಕದ ಐಸ್ ಬಾಕ್ಸ್ ನಲ್ಲಿ 50 ವಯಲ್ಸ್ ಲಸಿಕೆ ಸಾಗಿಸಿದೆ. ವಿಶೇಷ ಬಾಕ್ಸ್‌ನಲ್ಲಿ ಕೋವಿಡ್ ಲಸಿಕೆ ಇಡಲಾಗಿತ್ತು. ಸೆಕೆಂಡ್‌ಗೆ 10 ಮೀಟರ್ ಕ್ರಮಿಸುವ ಸಾಮರ್ಥ್ಯವನ್ನು ಈ ಡ್ರೋನ್ ಹೊಂದಿದೆ.

ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಮುಂದೆಯೂ ಇದೇ ರೀತಿ ಪೂರೈಕೆ ಮಾಡಲಾಗುತ್ತದೆ ಎಂದಿದ್ದಾರೆ. ಈ ಡ್ರೋನ್‌ ಅನ್ನು ಹಗುರವಾದ ಕಾರ್ಬನ್‌ ಫೈಬರ್ ಬಳಕೆ ಮಾಡಿ ನಿರ್ಮಾಣ ಮಾಡಲಾಗಿದೆ. ಡಿಟಿಟಲ್ ಆಟೋ ಪೈಲೆಟ್ ಸಹಿತ ಆಧುನಿಕ ತಂತ್ರಜ್ಞಾನವನ್ನು ಸಹ ಈ ಡ್ರೋನ್ ಹೊಂದಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.

ಈ ಅಕ್ಟಾಕಾಪ್ಟರ್ ಮೂಲಕ ಔಷಧಿ, ಆಹಾರ, ಅಂಚೆ, ಮಾನವನ ಅಂಗಾಂಗಗಳನ್ನು ಸಾಗಣೆ ಮಾಡಬಹುದಾಗಿದೆ ಎಂಬ ಅಂಶವನ್ನು ಇದೀಗ ಕಂಡುಹಿಡಿಯಲಾಗಿದೆ.

ಶನಿವಾರ (ನ.13) ರಾಜ್ಯದಲ್ಲಿ 1,41,188 ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 33,938 ಡೋಸ್, ತುಮಕೂರಿನಲ್ಲಿ 10,441 ಡೋಸ್, ಬೆಳಗಾವಿಯಲ್ಲಿ 10,416 ಡೋಸ್ ಲಸಿಕೆ ನೀಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 6,80,85,643 ಡೋಸ್ ಲಸಿಕೆ ನೀಡಲಾಗಿದೆ.