ಬೆಂಗಳೂರು: ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಶಾಕ್ ನೀಡಿದ್ದಾರೆ. ಬೆಳಗಿನ 5.45ರ ಸುಮಾರಿಗೆ ಜಮೀರ್ ಅಹಮ್ಮದ್ ಅವರ ನಿವಾಸ, ಕಚೇರಿ ಮತ್ತು ಫ್ಲ್ಯಾಟ್ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಅಧಿಕಾರಿಗಳು ಎರಡು ಕಾರುಗಳಲ್ಲಿ ಬಂದಿದ್ದು, ಜಮೀರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಜಮೀರ್ ಅಹ್ಮದ್ ಸದ್ಯ ಮನೆಯಲ್ಲೇ ಇದ್ದಾರೆ ಎಂದು ತಿಳಿದು ಬಂದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಜಮೀರ್ ಅವರು ಈಚೆಗಷ್ಟೇ ತಮ್ಮ ಪುತ್ರಿಯ ಮದುವೆಯನ್ನು ಭರ್ಜರಿಯಾಗಿ ಮಾಡಿದ್ದರು. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಮಾರಂಭ ಏರ್ಪಡಿಸಿದ್ದರು. ಇಷ್ಟೇ ಅಲ್ಲದೇ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ, ವಿಶಾಲವಾದ ಜಾಗದಲ್ಲಿ ಭವ್ಯ ಬಂಗಲೆ ನಿರ್ಮಾಣ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅನಾಮಧೇಯ ಮೂಲಗಳಿಂದ ಮಾಹಿತಿ ಸಂಗ್ರಹ ಮಾಡಿತ್ತು. ಜಮೀರ್ ಕಳೆದ ಹಣಕಾಸು ವರ್ಷದಲ್ಲಿ ಘೋಷಿಸಿಕೊಂಡ ಆಸ್ತಿಗಿಂತ ದುಪ್ಪಟ್ಟು ಆಸ್ತಿ ಹೊಂದಿರುವ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು.