ಜಿಲ್ಲೆ

ಕೈಗೆ ಬಂದ ತುತ್ತು ಬಾಯಿಗಿಲ್ಲ: ಸರ್ಕಾರಿ ಕೆಲಸ ಸಿಕ್ಕಿಲ್ಲ.. ಬ್ಲಡಿ ಸಿಸ್ಟಮ್​ ಎಂದು ಬರೆದಿಟ್ಟು ಬಾರದ ಲೋಕಕ್ಕೆ ಯುವತಿ...

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ಮಹಿಳೆಯೊಬ್ಬರು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಉಷಾ (22) ಆತ್ಮಹತ್ಯೆಗೆ ಶರಣಾದ ಮಹಿಳೆ. ಇವರ ವಿರುದ್ಧ ಕ್ರಿಮಿನಲ್​ ಕೇಸ್​ ಇದ್ದುದರಿಂದ ಸರ್ಕಾರಿ ಕೆಲಸ ನೇಮಕಕ್ಕೆ ಅಡ್ಡಿಯಾಗಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಕೆಲಸಕ್ಕೋಸ್ಕರ ಸಾಯ್ತಾ ಇರೋದು, ಬ್ಲಡಿ ಸಿಸ್ಟಮ್ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಕ್ಕ ಪಕ್ಕದ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಉಷಾ ಆರೋಪಿಯಾಗಿದ್ದರು. ಉಷಾ ತಾಯಿ ಯಶೋಧಮ್ಮ ಕುಟುಂಬ ಮತ್ತು ಪಕ್ಕದ ನಾಗರಾಜ ಕುಟುಂಬದ ಮಧ್ಯೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಜಗಳ ನಡೆದಿತ್ತು. ಪ್ರಕರಣದಲ್ಲಿ ರಾಜಿ ಆಗುವಂತೆ ಎದುರಾಳಿಗಳಿಗೆ ಉಷಾ ಮನವಿ ಮಾಡಿದ್ದರು.

ಆದರೆ ಅವರು ರಾಜಿ ಆಗಿರಲಿಲ್ಲ. ಬದಲಿಗೆ ಉಷಾ ಮತ್ತು ಕುಟುಂಬದವರಿಗೆ ನಾಗರಾಜ್ ಕುಟುಂಬ ನಿಂದಿಸಿ ಕಳಿಸಿತ್ತು. ಆದರೆ ಚಾರ್ಜ್​ಷೀಟ್​ನಲ್ಲಿ ಉಷಾ ಅವರ ಹೆಸರು ಇತ್ತು. ಇದಕ್ಕೂ, ತಮಗೂ ಸಂಬಂಧ ಇಲ್ಲ ಎಂದರೂ ಪೊಲೀಸರು ಕೇಳಿರಲಿಲ್ಲ. ಜಾರ್ಜ್​ಷೀಟ್​ನಲ್ಲಿ ಹೆಸರು ಬಿಡಲು ಪೊಲೀಸರ ಬಳಿ ಮನವಿ ಮಾಡಿದ್ದರೂ ಪ್ರಯೋಜನ ಆಗಿರಲಿಲ್ಲ.

ಕೇಸ್ ರಾಜಿ ಆಗದ ಕಾರಣ ಉಷಾ ಆರೋಪಿಯಾಗಿಯೇ ಉಳಿದಿದ್ದರು. ಸರ್ಕಾರಿ ಕೆಲಸ ಸಿಗುವ ಸಾಧ್ಯತೆ ಇದ್ದರೂ ಪೊಲೀಸ್ ವೆರಿಫಿಕೇಷನ್ ವೇಳೆ ಸರ್ಕಾರ ಕೆಲಸ ನೇಮಕಕ್ಕೆ ಸಮಸ್ಯೆ ಆಗುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನ್ನ ಸಾವಿಗೆ ನನ್ನ ಕುಟುಂಬ ಕಾರಣ ಅಲ್ಲ, ವ್ಯವಸ್ಥೆಯೇ ಕಾರಣ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಾಗರಾಜ್ ಮತ್ತಿತರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. (ದಿಗ್ವಿಜಯ ನ್ಯೂಸ್​)