ಜಿಲ್ಲೆ

ಅಣ್ಣ ಬುದ್ಧಿಹೇಳಿದ ಎಂದು ತಮ್ಮನ ಆತ್ಮಹತ್ಯೆ... ಸಾವಿನ ಸುದ್ದಿ ಕೇಳಿ ಅಣ್ಣನೂ ನೇಣಿಗೆ ಶರಣು!

suchetana

ಮೈಸೂರು: ಅಣ್ಣ ಬೈದು ಬುದ್ಧಿಮಾತು ಹೇಳಿದ ಎನ್ನುವ ಕಾರಣಕ್ಕೆ ನೊಂದು ತಮ್ಮ ಆತ್ಮಹತ್ಯೆ ಮಾಡಿಕೊಂಡರೆ, ತನ್ನಿಂದಾಗಿ ತಮ್ಮ ಮೃತಪಟ್ಟ ಸುದ್ದಿ ಕೇಳಿ, ತಮ್ಮನೂ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ನಡೆದಿದೆ.

ಅಣ್ಣ- ತಮ್ಮಂದಿರ ಚಿತೆಗಳು ಅಕ್ಕ‍ಪಕ್ಕದಲ್ಲಿಯೇ ಉರಿಯುತ್ತಿರುವುದನ್ನು ಕಂಡ ಕುಟುಂಬಸ್ಥರು ಮಾತ್ರವಲ್ಲದೇ ಗ್ರಾಮಸ್ಥರೂ ಕಣ್ಣೀರಿಟ್ಟಿದ್ದಾರೆ.

ವೆಂಕಟೇಶ್(28) ಮತ್ತು ಹರೀಶ್(26) ಮೃತ ಸೋದರರು.

ರೈತನಾಗಿದ್ದ ಹರೀಶ್​ ಟ್ರ್ಯಾಕ್ಟರ್ ಚಾಲಕನಾಗಿದ್ದ. ಆತ ತುಂಬಾ ಅಜಾಗರೂಕತೆಯಿಂದ ಟ್ರ್ಯಾಕ್ಟರ್‌ ಚಾಲನೆ ಮಾಡುತ್ತಿದ್ದ. ಹೀಗೆ ಮಾಡಿದರೆ ಅನಾಹುತ ಸಂಭವಿಸಬಹುದು ಎನ್ನುವ ಕಾರಣಕ್ಕೆ ಅಣ್ಣ ವೆಂಕಟೇಶ್‌ ತಮ್ಮನಿಗೆ ಬುದ್ಧಿಮಾತು ಹೇಳಿದ್ದ. ಈ ಮೊದಲು ತಂದೆ ಕೂಡ ಆತನಿಗೆ ಬುದ್ಧಿ ಹೇಳಿದ್ದರು. ಆದರೆ ಅಣ್ಣ ಬೈದು ಬುದ್ಧಿಮಾತು ಹೇಳಿದ್ದನ್ನು ತಮ್ಮ ಹರೀಶ್‌ ಸಹಿಸದಾದ.

ಇದರಿಂದ ನೊಂದುಕೊಂಡು ಹರೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ನೇಣು ಬಿಗಿದುಕೊಂಡಿರುವ ದೃಶ್ಯಗಳನ್ನು ಅಣ್ಣನ ಮೊಬೈಲ್ ಫೋನ್​ಗೆ ಕಳುಹಿಸಿದ್ದರು ಸ್ನೇಹಿತರು.

ಅವನ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಲೇ ಅಣ್ಣ ವೆಂಕಟೇಶ್‌ ತನ್ನಿಂದಾಗಿ ತಮ್ಮ ಮೃತಪಟ್ಟಿರುವುದನ್ನು ಅರಗಿಸಿಕೊಳ್ಳಲಾಗದೇ ಮಾನಸಿಕವಾಗಿ ಕುಸಿದಿದ್ದ. ಇದರಿಂದ ತುಂಬಾ ನೊಂದುಕೊಂಡ ಆತ ರಸ್ತೆ ಬದಿಯ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಎಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.