ಬೆಂಗಳೂರು: ಕಪ್ಪು ಶಿಲೀಂಧ್ರ ( ಬ್ಲ್ಯಾಕ್ ಫಂಗಸ್) ಸೋಂಕಿಗೆ ತುತ್ತಾದವರಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಸೋಮವಾರ (ಮೇ 17) ವಿಶೇಷ ಚಿಕಿತ್ಸೆ ನೀಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆಗೆ ಭಾನುವಾರ ಮಾತನಾಡಿದ ಅವರು, ಇದೊಂದು ಪ್ರಾಯೋಗಿಕ ಕ್ರಮವಾಗಿದ್ದು, ಚಿಕಿತ್ಸೆಗೆ 7 ವಾರಗಳು ಬೇಕಾಗಲಿವೆ. 2-3 ಲಕ್ಷ ರೂ. ವೆಚ್ಚವಾಗುವ ಅಂದಾಜಿದೆ.
ಬ್ಲ್ಯಾಕ್ ಫಂಗಸ್ ಬಾಧಿತರಿಗೆ ವಿಶೇಷ ಚಿಕಿತ್ಸೆ ಜಿಲ್ಲಾ ಆಸ್ಪತ್ರೆಗಳಿಗೆ ವಿಸ್ತರಿಸುವ ಚಿಂತನೆಯಿದೆ. ಉಚಿತವಾಗಿ ಚಿಕಿತ್ಸೆ ನೀಡುವ ಬಗ್ಗೆ ಸಿಎಂ ಬಿಎಸ್ ವೈ ಜತೆಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿದರು.
ತಜ್ಞರ ಸಮಿತಿ ರಚನೆ: ಈ ರೋಗ ಬಾಧಿತರು ರಾಜ್ಯದಲ್ಲಿ ಎಷ್ಟಿದ್ದಾರೆ ಎಂಬ ನಿಖರವಾದ ಅಂಕಿಅಂಶಗಳು ಸದ್ಯಕ್ಕೆ ಲಭ್ಯವಿಲ್ಲ. ಕೆಲವರು ಖಾಸಗಿ ಆಸ್ಪತ್ರೆಗಳಿಗೂ ದಾಖಲಾಗಿರುತ್ತಾರೆ. ವಾಸ್ತವಾಂಶ ಅಧ್ಯಯನ, ನಿಖರ ಮಾಹಿತಿ ಪಡೆಯಲೆಂದು ತಜ್ಞರ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ ಎಂದರು.
ಅತಿಯಾದ ರೋಗ ನಿರೋಧಕ ಶಕ್ತಿ ಹಾಗೂ ಸ್ಟಿರಾಯ್ಡ್ ಬಳಕೆಯಿಂದ ಈ ವ್ಯಾಧಿ ಮೂಗಿನ ಮೂಲಕ ಶ್ವಾಸಕೋಶ ಪ್ರವೇಶಿಸುತ್ತದೆ. ಪ್ರಾರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು. ನಿರ್ಲಕ್ಷಿಸಿದರೆ ಪ್ರಾಣಕ್ಕೆ ಕುತ್ತು ಬರುತ್ತದೆ ಎಂದು ಎಚ್ಚರಿಸಿದರು.
ಬ್ಲ್ಯಾಕ್ ಫಂಗಸ್ ಸೋಂಕಿನ ಚಿಕಿತ್ಸೆಗೆ ಬೇಕಾದ ಚುಚ್ಚುಮದ್ದು ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲಿ ಕೊರತೆಯಿದೆ. 20,000 ವಯಲ್ಸ್ ಪೂರೈಸಬೇಕೆಂಬ ಬೇಡಿಕೆ ಕೇಂದ್ರದ ಮುಂದಿಟ್ಟಿದ್ದು, ಕೇಂದ್ರದ ಸಚಿವರಾದ ಡಾ.ಹರ್ಷವರ್ಧನ ಹಾಗೂ ಡಿ.ವಿ.ಸದಾನಂದ ಗೌಡ ಅವರೊಂದಿಗೆ ನಿಕಟ ಸಂಪರ್ಕದಲ್ಲಿರುವೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು.